ಉಡುಪಿ, ಮಾ 28 : ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಯುವಕನೋರ್ವ ಕೈಗೆ ಬಾಟಲಿ ಇರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ಉದ್ಯಾವರ ನಿವಾಸಿ ರಾಕೇಶ್ ಪೂಜಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಕೆಲ ದಿನಗಳ ಹಿಂದೆ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಚಂದ್ರಕಾಂತ್ ಎಂಬವರ ಕಾರು ಅಡ್ಡ ಬಂದಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ರಾಕೇಶ್ ನನ್ನು ಅವಾಚ್ಯವಾಗಿ ಬೈದಿದ್ದಲ್ಲದೇ ತನ್ನ ತಂದೆ ತಾಯಿಗೂ ಬೈದಿದ್ದಾರೆ ಎನ್ನಲಾಗಿದೆ. ಬಳಿಕ ಕಾರು ಮಾಲಕ ರಾಕೇಶ್ ವಿರುದ್ಧ ದೂರನ್ನು ನೀಡಿದ್ದರು. ಈ ಹಿನ್ನೆಲೆ ಠಾಣೆಗೆ ಕರೆಸಿದ ಪೊಲೀಸರು ರಾಕೇಶ್ ನಿಗೆ ಲಾಠಿಯಿಂದ ಹಲ್ಲೆ ನಡೆಸಿದ ಪರಿಣಾಮ ಈತನ ಕೈ ಮೂಳೆ ಮುರಿತವಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇದೀಗ ರಾಕೇಶ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಾರು ಚಾಲಕ ಹಾಗೂ ರಾಕೇಶ್ ನಡುವಿನ ವಾಗ್ವಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.