ಮಾ,26: ಸ್ಯಾಂಡಲ್ ವುಡ್ ನ ಹಿರಿಯ ಅಭಿನೇತ್ರಿ ಜಯಂತಿ ಅವರು ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದ್ದು ಸೋಮವಾರ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಅಸ್ತಮದಿಂದ ಬಳಲುತ್ತಿದ್ದ ಜಯಂತಿ ಅವರ ಆರೋಗ್ಯದಲ್ಲಿ ಇಂದು ಏರುಪೇರಾಗಿದ್ದು, ಬೆಳಿಗ್ಗೆ 11 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನು ಜಯಂತಿ ಅವರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಪುತ್ರ ಕೃಷ್ಣಕುಮಾರ್, ಅಮ್ಮ ಹಲವು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಅಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ.