ಕುಂದಾಪುರ, ಮಾ 26 : ಕುಂದಾಪುರದ ಖಾಸಗಿ ವಸತಿಗೃಹವೊಂದರಲ್ಲಿ 3 ವರ್ಷಗಳ ಹಿಂದೆ ಗಂಗೊಳ್ಳಿ ಮೂಲದ ಮಹಿಳೆಯೊಬ್ಬರನ್ನು ಕೊಲೆಗೈದು, ಚಿನ್ನಾಭರಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಆರೋಪಿ ಮುಂಬಯಿ ಮೂಲದ ಅಫ್ಜಲ್ ಅಲಿಯಾಸ್ ಅಫ್ಜಲ್ ಖಾನ್ (42) ಮೇಲಿನ ಅಪರಾಧ ಸಾಬೀತಾಗಿದ್ದು, ಆರೋಪಿಯ ಕೊನೆಯ ಉಸಿರು ಇರುವ ತನಕ ಜೀವಾವಧಿ ಶಿಕ್ಷೆಯಾಗಿದೆ. ಮಾ. 26 ರಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಶ ಪ್ರಕಾಶ್ ಖಂಡೇರಿ ತೀರ್ಪು ನೀಡಿದ್ದು, ಕೊಲೆ ಪ್ರಕರಣಕ್ಕೆ ಸಂಬಂಬಂಧಪಟ್ಟಂತೆ ಸೆಕ್ಷನ್ 302 ಪ್ರಕಾರ ಆರೋಪಿಯ ಕೊನೆಯ ಉಸಿರು ಇರುವ ತನಕ ಜೀವಾವದಿ ಶಿಕ್ಷೆ ಹಾಗೂ ರೂ.50 ಸಾವಿರ ದಂಡವನ್ನಯ ವಿಧಿಸಿ ತೀರ್ಪು ನೀಡಿದ್ದಾರೆ.
ಅಂತೆಯೇ ಆರೋಪಿಯು ಮೃತಳ ಮೈಮೇಲಿನ ಆಭರಣ ಕಳವು ಮಾಡಿರುವುದಕ್ಕಾಗಿ ಸೆಕ್ಷನ್ 404ರ ಪ್ರಕಾರ 3 ವರ್ಷ ಕಠಿಣ ಶಿಕ್ಷೆ ಮತ್ತು ರೂ.10 ಸಾವಿರ ದಂಡ, ಆರೋಪಿಯು ಮಹಿಳೆಯನ್ನು ಮೋಸದಿಂದ ಹೋಟೆಲ್ಗೆ ಕರೆದೋಯ್ದ ಕಾರಣಕ್ಕೆ ಸೆಕ್ಷನ್ 417ರ ಪ್ರಕಾರ 1 ವರ್ಷ ಕಠಿಣ ಸಜೆ, ರೂ.5 ಸಾವಿರ ದಂಡ, ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸುಳ್ಳು ಸುದ್ಧಿ ಸೃಷ್ಟಿಸಿದ್ದಕ್ಕಾಗಿ ಸೆಕ್ಷನ್ 465ರ ಪ್ರಕಾರ 1 ವರ್ಷ ಕಠಿಣ ಸಜೆ, ರೂ. ೫ಸಾವಿರ ದಂಡ, ಮೋಸ ಮಾಡಿದ ಉದ್ದೇಶಕ್ಕಾಗಿ ಸೆಕ್ಷನ್ 468ರ ಪ್ರಕಾರ 5 ವರ್ಷ ಸಜೆ, ರೂ.20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಮೃತಳ ಮಕ್ಕಳಿಗೆ ಪರಿಹಾರ ಪಡೆಯಲು ಕೂಡಾ ಅವಕಾಶಗಳಿದ್ದು, ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶಗಳಿವೆ ಎನ್ನುವುದನ್ನು ತೀರ್ಪಿನಲ್ಲಿ ತಿಳಿಸಲಾಗಿದೆ. ಆರೋಪಿಗೆ ಜಿಲ್ಲಾ ಸರಕಾರಿ ಅಭಿಯೋಜಕರಾಗಿ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
ಮೃತ ಮಹಿಳೆ ಲಲಿತ ದೇವಾಡಿಗ
ಪ್ರಕರಣದ ವಿವರ
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿರುವ ವಸತಿ ಗೃಹವೊಂದರಲ್ಲಿ 2015 ರ ಏಪ್ರಿಲ್ 15 ರಂದು ವಸತಿ ಗೃಹವೊಂದರಲ್ಲಿ ಅಜಯ್ ಕುಮಾರ್ ಎಂದು ಹೇಳಿಕೊಂಡು ರೂಮ್ ಬುಕ್ ಮಾಡಿದ್ದು, ಗಂಗೊಳ್ಳಿಯ ಲೀಲಾವತಿ ದೇವಾಡಿಗ (55) ಅವರನ್ನು ಗಂಗೊಳ್ಳಿಯ ದೇವಸ್ಥಾನಕ್ಕೆ ದೇಣಿಗೆ ಕೊಡುವುದಾಗಿ ಕರೆಸಿ, ಬಳಿಕ ಜ್ಯೂಸ್ ಹಾಗೂ ನೀರಲ್ಲಿ ಅಮಲು ಪದಾರ್ಥ ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದು, ಅನಂತರ ವಿದ್ಯುತ್ ವಯರ್ನಿಂದ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಗಾಯವಾದ ಕುತ್ತಿಗೆಗೆ ಬಟ್ಟೆ ಕಟ್ಟಿ ವಸತಿ ಗೃಹದಿಂದ ಲೀಲಾವತಿ ಅವರ ಮೃತದೇಹವನ್ನು ಹೊರಗೆ ಸಾಗಿಸಲು ಪ್ರಯತ್ನಿಸಿದ್ದು, ಅದರಲ್ಲಿ ವಿಫಲರಾದ ಬಳಿಕ ಆಕೆಯ ಹೆಸರಲ್ಲಿ ಈತನೇ ನಕಲಿ ಡೆತ್ ನೋಟ್ ಬೇರೊಬ್ಬರಿಂದ ಬರೆಸಿ, ಕೊಲೆ ಮಾಡಲು ಬಳಸಿದ ವಯರ್ನ್ನು ಕಿಟಕಿಯಿಂದ ಹೊರ ಹಾಕಿ, ಮೃತದೇಹದ ಮೇಲಿದ್ದ ಚಿನ್ನಾಭರಣ, ಮೊಬಲ್ನ್ನು ಸುಲಿಗೆ ಮಾಡಿ ಮುಂಬಯಿಗೆ ಪರಾರಿಯಾಗಿದ್ದ.
ಪ್ರಕರಣ ನಡೆದ ಕೆಲ ದಿನಗಳ ಬಳಿಕ ಆತನನ್ನು ಆಗಿನ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್ ನೇತೃತ್ವದ ಕುಂದಾಪುರ ಪೊಲೀಸರ ತಂಡ ಮುಂಬಯಿಯಲ್ಲಿ ಬಂಧಿಸಿದ್ದರು. ತನಿಖೆ ನಡೆಸಿದ ವೃತ್ತ ನಿರೀಕ್ಷಕ ದಿವಾಕರ್ ಅವರು ಕುಂದಾಪುರದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ 45 ಸಾಂದರ್ಭಿಕ ಸಾಕ್ಷಿಗಳಿದ್ದು, ಅದರಲ್ಲಿ 25 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಈತ ಚಿನ್ನಾಭರಣ ಅಡವಿಟ್ಟ ಮುಂಬಯಿಯ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ವಿಚಾರಣೆ ವೇಳೆ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಮೊದಲಿಗೆ ಹಿರಿಯಡ್ಕ ಜೈಲಿನಲ್ಲಿದ್ದ ಆರೋಪಿಯನ್ನು ಅ ನಂತರ ಕಾರವಾರ ಜೈಲಿಗೆ ಸ್ಥಳಾಂತರಗೊಳಿಸಲಾಗಿತ್ತು.