ಮಂಗಳೂರು, ಮಾ 26 : ನಗರದ ಮಲ್ಲಿಕಟ್ಟೆಯ ಬಳಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಹೊಸ ಕದ್ರಿ ಮಾರುಕಟ್ಟೆ ಕಟ್ಟಡದ ಶಿಲಾನ್ಯಾಸವನ್ನು ಮಾ 26 ರ ಸೋಮವಾರ ಶಾಸಕ ಜೆ.ಆರ್ .ಲೋಬೋ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕದ್ರಿ ಬಳಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಹಲವು ವರ್ಷಗಳ ಬೇಡಿಕೆಯಾಗಿದ್ದೂ, ಇದೀಗ 12 ಕೋಟಿ 30 ಲಕ್ಷ ವೆಚ್ಚದಲ್ಲಿ ಕದ್ರಿ ಮಾರುಕಟ್ಟೆ ಮರು ನಿರ್ಮಾಣವಾಗಲಿದೆ ಎಂದರು. ಕದ್ರಿ ಮಾರ್ಕೆಟ್ ಕಾಮಗಾರಿ ವಿಚಾರ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆದಿದ್ದೂ, ರಾಜ್ಯ ಸರ್ಕಾರ ಈಗಾಗಲೇ 5 ಕೋಟಿ ಮಂಜೂರು ಮಾಡಿದೆ. ಸುಮಾರು 60 ಲಕ್ಷ ವೆಚ್ಚದಲ್ಲಿ ತಾತ್ಕಲಿಕ ಮಾರುಕಟ್ಟೆ ನಿರ್ಮಾಣ ಮಾಡಿ ಈಗ ಇರುವ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು. 12 ಕೋಟಿ 30 ಲಕ್ಷ ವೆಚ್ಚದ ಕಾಮಗಾರಿ ಜಿಎಸ್ ಟಿ ಸೇರಿ ಸುಮಾರು 16 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಕದ್ರಿ ಮಾರುಕಟ್ಟೆ, 18 ತಿಂಗಳೊಳಗೆ ಪೂರ್ಣವಾಗಲಿದೆ ಎಂದು ಭರವಸೆ ನೀಡಿದರು.
ಈಗ ನಗರದಲ್ಲಿ ಮಾರ್ಕೆಟ್ಗಳ ಅಭಿವೃದ್ಧಿ ಕಾರ್ಯಗಳು ಬಹಳ ಮಹತ್ವವನ್ನು ಪಡೆದುಕೊಂಡಿದ್ದು ಈಗಾಗಲೇ ಬಿಜೈ ಮಾರ್ಕೆಟ್ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯಾಗಿವೆ. ಇನ್ನು ಸೆಂಟ್ರಲ್ ಮಾರ್ಕೆಟ್ ಅಭಿವೃದ್ಧಿ ಕಾಮಗಾರಿಯು ಸ್ಮಾರ್ಟ್ ಸಿಟಿ ಪ್ಯಾಕೇಜ್ ನಲ್ಲಿದ್ದೂ, ಉಳಿದಂತೆ ಉರ್ವ ಮಾರುಕಟ್ಟೆ ಹಾಗೂ ಅಳಕೆ ಮಾರುಕಟ್ಟೆಗಳ ಕಾಮಗಾರಿ ಕೊನೆಯ ಹಂತದಲ್ಲಿದ್ದು ಮುಂದಿನ 2 ತಿಂಗಳೊಳಗೆ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ ಎಂದರು. ಕಂಕನಾಡಿ ಮಾರುಕಟ್ಟೆಯನ್ನು 42 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿ ಮಾಡಲಾಗುವುದು. ಬಂದರಿನಲ್ಲಿಯೂ 2 ಮಾರುಕಟ್ಟೆ ನಿರ್ಮಾಣ ಕಾಮಗಾರಿಯೂ ಯೋಜನೆಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಬಾಸ್ಕರ್ ಮೊಯಿಲಿ, ಉಪಮೇಯರ್ ಮೊಹಮ್ಮದ್, ಪಾಲಿಕೆ ಸದಸ್ಯ ನವೀನ್ ಡಿ ಸೋಜಾ, ಪ್ರವೀಣ್ ಚಂದ್ರ ಆಳ್ವ, ಸಬೀತಾ ಮಸ್ಕತ್ ಮುಂತಾದವರು ಉಪಸ್ಥಿತರಿದ್ದರು.