ಮಾ, 26: ಸೈಬೀರಿಯಾದ ಕೆಮರಾವ್ ನಗರದ ಶಾಪಿಂಗ್ ಮಳಿಗೆಯೊಂದರಲ್ಲಿ ಭಾನುವಾರ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಇಲ್ಲಿಯವರೆಗೆ 48 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, 69 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 4 ಮಹಡಿಗಳ ಕಟ್ಟಡದಲ್ಲಿ ಏಕಾಏಕಿ ಬೆಂಕಿ ವ್ಯಾಪಿಸಿದ್ದು ಒಳಗಿದ್ದ ನೂರಾರು ಗ್ರಾಹಕರು ದಿಕ್ಕಾಪಾಲಾಗಿ ಓಡಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಬೆಂಕಿಯ ಕೆನ್ನಾಲೆಗೆ ಸಿಲುಕಿ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರಲ್ಲಿ 15 ಕ್ಕೂ ಹೆಚ್ಚು ಮಂದಿ ಪುಟ್ಟ ಮಕ್ಕಳು ಎಂದು ಹೇಳಲಾಗುತ್ತಿದ್ದು, 43 ಮಂದಿ ಗಾಯಗೊಂಡಿದ್ದಾರೆ. ಸಿನಿಮಾ ಹಾಲ್ , ರೆಸ್ಟೋರೆಂಟ್ ಮತ್ತು ಮಳಿಗೆಗಳಿದ್ದ ಮಾಲ್ ನಿಂದ 100 ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತವಾಗಿ ಹೊರಕರೆದು ತರಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಸಲಾಗುತ್ತಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.