ಕುಂದಾಪುರ, ಸೆ19: ಮುಂಬರುವ ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ, ಸ್ಪಷ್ಟ ಬಹುಮತದಿಂದ ಗೆಲ್ಲುತ್ತಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕುಂದಾಪರ ತಾಲೂಕಿನ ಹೆರಿಕುದ್ರುವಿನಲ್ಲಿ ಅಂಡರ್ ಪಾಸ್ ಸ್ಥಳ ವೀಕ್ಷಣೆಗೆಂದು ಬಂದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಹಾಲಾಡಿಯವರ ವಿಚಾರದಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ. ತಾಂತ್ರಿಕ ಕಾರಣದಿಂದ ಅವರು ಇನ್ನೂ ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಕಳೆದ ಲೋಕಸಭಾ ಚುನಾವಣೆಯಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ನಮ್ಮ ಪಕ್ಷಕ್ಕೆ ಬಂದು ಸ್ಪಷ್ಟ ಬಹುಮತದಿಂದ ಗೆಲ್ಲುತ್ತಾರೆ ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಹಾಲಾಡಿಯವರನ್ನು ಕಣಕ್ಕಿಳಿಸುವ ಕುರಿತು ಮಾತನಾಡಿದ ಅವರು ಪಕ್ಷದ ಮುಖಂಡರು ಈಗಾಗಲೇ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ. ಜನಬೆಂಬಲ ಹೊಂದಿರುವ ಅಭ್ಯರ್ಥಿಯನ್ನು ಅದೇ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಸೂಚನೆ ನೀಡಿದ್ದಾರೆ. ಈ ಕುರಿತು ಎಲ್ಲಾ ಕಡೆ ಸರ್ವೆಯನ್ನು ಮಾಡುತ್ತಿದ್ದಾರೆ. ಸರ್ವೆ ವರದಿಯ ಪ್ರಕಾರ ಯಾರಿಗೆ ಜನ ಬೆಂಬಲವಿದೆಯೋ ಅವರನ್ನು ಕಣಕ್ಕಿಳಿಸುತ್ತೇವೆ. ಕುಂದಾಪುರ ಕ್ಷೇತ್ರದಲ್ಲಿ ಮೊದಲಿನಿಂದಲೂ ಹಾಲಾಡಿಯವರಿಗೆ ಜನ ಬೆಂಬಲವಿದೆ. ಆದ್ದರಿಂದ ಕುಂದಾಪುರಕ್ಕೆ ಹಾಲಾಡಿಯವರೇ ನಮ್ಮ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.
ಹೆರಿಕುದ್ರು ಜನರ ಬಹುದಿನದ ಬೇಡಿಕೆಯಾದ ಅಂಡರ್ ಪಾಸ್ ಕುರಿತು ನಿತಿನ್ ಗಡ್ಕರಿಯವರಿಗೆ ಮನವಿ ಮಾಡಿದಾಗ ಅವರು ಇದಕ್ಕೆ ಸಮ್ಮತಿಸಿ ಅನುಮೋದನೆಯನ್ನು ನೀಡಿದ್ದಾರೆ. ಈ ಅಂಡರ್ ಪಾಸ್ ಕಾಮಗಾರಿ ಮುಂದಿನ ಮಳೆಗಾಲದೊಳಗೆ ಮುಗಿಸಿ, ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭ ಕುಂದಾಪುರ ಬಿಜೆಪಿ ಮಂಡಳದ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ಕಿರಣ್ ಕೊಡ್ಗಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುರೇಶ್ ಶೆಟ್ಟಿ, ಸದಾನಂದ ಬಳ್ಕೂರು, ಸುನೀಲ್ ಶೆಟ್ಟಿ ಹೆರಿಕುದ್ರು ಮೊದಲಾದವರು ಉಪಸ್ಥಿತರಿದ್ದರು.