ಬಂಟ್ವಾಳ, ಸೆ19: ಸರಕಾರದ ನಿರ್ಧಿಷ್ಟವಾದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಾಗ ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಫಲ್ಗುಣಿ ಸ್ರ್ತೀ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಬಿ.ಸಿರೋಡ್ ಇದರ ವಾರ್ಷಿಕ ಮಹಾ ಸಭೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆಯ ವತಿಯಿಂದ ಉಚಿತ ಚಿಕಿತ್ಸಾ ಶಿಬಿರವನ್ನು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಆರ್ಥಿಕವಾಗಿ, ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲಾ ರೀತಿಯಿಂದಲೂ ಮಹಿಳೆಯರನ್ನು ಬಲಿಷ್ಠರನ್ನಾಗಿ ಮಾಡಲು ಮತ್ತು ಹೆಣ್ಮಕ್ಕಳ, ಮಕ್ಕಳ ಕಲ್ಯಾಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದೆ ಎಂದರು.
ಸ್ತ್ರೀ ಶಕ್ತಿ ಸಂಘಗಳು ಸಹಕಾರಿ ಸಂಘಗಳನ್ನು ಸ್ವತಂತ್ರವಾಗಿ ಸ್ಥಾಪಿಸಿ ಹೆಣ್ಮಕ್ಕಳ ಸ್ವಾಭಿಮಾನದ ಬದುಕಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಸಾಮಾಜಿಕವಾಗಿ ಮಹಿಳೆಯರು ಸಬಲರಾಗಲು ಸ್ತ್ರೀ ಶಕ್ತಿ ಸಂಘಗಳು ಸಹಕಾರಿಯಾಗಿವೆ. ಸರಕಾರ ಇಲಾಖೆಯ ಮೂಲಕ ಅಂಗನವಾಡಿಗಳಲ್ಲಿ ಅಗತ್ಯ ಅಹಾರದ ಜೊತೆ ಗರ್ಭಿಣಿಯರಿಗೆ ಮಾತೃ ಪೂರ್ಣ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭ ಸಹಕಾರಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಿದ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರನ್ನು ಗೌರವಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರು ಸಂಘಕ್ಕೆ ನೀಡಿದ ಉಚಿತ ಕಂಪ್ಯೂಟರನ್ನು ಸಚಿವರ ಮೂಲಕ ಸಂಘದ ಸದಸ್ಯರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಲ್ಗುಣಿ ಸ್ರ್ತೀ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಇದರ ಅಧ್ಯಕ್ಷೆ ಗೀತಾ ಜಯತೀರ್ಥ ವಹಿಸಿದ್ದರು. ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಶಿ, ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಮಾಯಿಲಪ್ಪ ಸಾಲ್ಯಾನ್, ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ| ಸಹನಾ ಶೆಟ್ಟಿ, ಸಾಂತ್ವಾನ ಕೇಂಧ್ರದ ಸಮಾಜ ಕಾರ್ಯಕರ್ತ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು. ಫಲ್ಗುಣಿ ಸ್ರ್ತೀ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಇದರ ಉಪಾಧ್ಯಕ್ಷೆ ಮಲ್ಲಿಕಾ ಶೆಟ್ಟಿ ಸ್ವಾಗತಿಸಿ, ನಿರ್ದೇಶಕಿ ಸುನೀತಾ ವಂದಿಸಿದರು.