ಮಂಗಳೂರು, ಮಾ 25 : ಎಂ ಆರ್ ಪಿ ಎಲ್ ಕಂಪೆನಿಗೆ ಮುಂದಿನ ಐದು ವರ್ಷಗಳಲ್ಲಿ 70,000 ಕೋಟಿ ಹೂಡಿಕೆ ಹರಿದು ಬರಲಿದೆ. 2020ರ ವೇಳೆಗೆ ಬಿಎಸ್- 6 ಗುಣಮಟ್ಟದ ಡೀಸೆಲ್ ಮತ್ತು ಪೆಟ್ರೋಲ್ ಉತ್ಪಾದನೆಗೆ ಕಂಪೆನಿ ಸಜ್ಜಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಎಂದು ಹೇಳಿದರು. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾ ೨೫ ರ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂ ಆರ್ ಪಿ ಎಲ್ ಮತ್ತು ಓ ಎಂ ಪಿ ಎಲ್ ವಿಲೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಸಲಹೆಸೂಚನೆಯನ್ನು ಅನುಸರಿಸಲಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ವಿಷಯದಲ್ಲಿ ಕಂಪೆನಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಿದರು. ಎಂ ಆರ್ ಪಿ ಎಲ್ ನಿಂದ ಪರಿಸರ ಮಾಲಿನ್ಯ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಎಂ ಆರ್ ಪಿ ಎಲ್ ಪರಿಸರ ಸ್ನೇಹಿ ಕೈಗಾರಿಕೆಯಾಗಿದೆ ಎಂದರು.
ಇನ್ನು ಇದೇ ವೇಳೆ ಅವರು ಕೊಚ್ಚಿಯಿಂದ ಮಂಗಳೂರು ಗೆ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಕಾಮಗಾರಿ ಕಾರ್ಯವು 2018ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು . 2019 ರ ಮಾರ್ಚ್ ವೇಳೆಗೆ ಮಂಗಳೂರು ಮತ್ತು ಸುತ್ತಲಿನ ಕೆಲವು ನಗರಗಳಲ್ಲಿ ಮನೆಗಳಿಗೆ ಕೊಳವೆ ಮೂಲಕ ಎಲ್ ಪಿಜಿ ಅನಿಲ ಪೂರೈಸುವ ಯೋಜನೆ ಇದೆ. ಹಾಗಾಗಿ ಇವುಗಳಿಗಾಗಿಯೇ ಪ್ರತ್ಯೇಕ ಕಂಪೆನಿಯೊಂದನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ನುಡಿದರು .