ಉಡುಪಿ, ಮಾ 24: ಬಿಜೆಪಿ ಪಕ್ಷವನ್ನು ಉದ್ಧಾರ ಮಾಡಲು ಮಧ್ವರಾಜ್ ಬರುವುದು ಬೇಡ, ಅವರಿಗೆ ಒಳಿತಾಗುವುದಾದರೆ ಬಿಜೆಪಿಗೆ ಬರಲಿ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ. ಅವರು ಮಾತ್ರವಲ್ಲ, ಯಾರು ಬಂದರೂ ನಾವು ಸ್ವಾಗತಿಸುತ್ತೇವೆ. ಉಡುಪಿ ಬಿಜೆಪಿ ಆಫೀಸಿಗೆ ಗೇಟ್ ಇಲ್ಲ. ಆದರೆ ಮಧ್ವರಾಜ್ ಬಿಜೆಪಿಗೆ ಬರುತ್ತೇನೆ, ಬರುವುದಿಲ್ಲ ಎಂದು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಿಜೆಪಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಮಾಧ್ಯಮದ ಹೇಳಿಕೆಯಲ್ಲಿಯೂ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು.
500 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಜಿಲ್ಲಾಸ್ಪತ್ರೆ ಹಗಲು ಕನಸಾಗಿದೆ. ಉಡುಪಿ ಜಿಲ್ಲೆಯ ಅಭಿವೃದ್ದಿಗೆ 2000 ಕೋಟಿ ರೂಪಾಯಿ ತಂದಿದ್ದೇನೆ ಎಂದು ಹೇಳುವ ಮೂಲಕ ಸಚಿವ ಮಧ್ವರಾಜ್ ಬೊಗಳೆ ಬಿಟ್ಟಿದ್ದಾರೆ. ಆದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಉಡುಪಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಜಿಲ್ಲೆಯ ರಸ್ತೆಗಳ ಸಮಗ್ರ ಅಭಿವೃದ್ಧಿಯಲ್ಲಿ ಸಚಿವರು ವಿಫಲ ರಾಗಿದ್ದಾರೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಖಾಸಗಿಯವರಿಗೆ ಕೊಡಲಾಗಿದೆ. ಉಡುಪಿಗೆ ಪಿ.ಜಿ ಸೆಂಟರ್ ಕೂಡ ಕೈತಪ್ಪಿದೆ. ಮಾತ್ರವಲ್ಲ ಸಚಿವರು ಬ್ರಹ್ಮಾವರವನ್ನು ಪುರಸಭೆ ಮಾಡಿಲ್ಲ. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಮರಳು ಮಾಫಿಯಾ ಸೃಷ್ಟಿಯಾಗಿದೆ ಎಂದು ಕಿಡಿಕಾರಿದರು.