ಹೊಸದಿಲ್ಲಿ, ಮಾ 23: ಮುಂದಿನ ದಿನಗಳಲ್ಲಿ ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಕಳೆದ ವರ್ಷ ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕೆ ವಿಧಿಸಿದ್ದ ಮಾಸಿಕ 10 ಸಾವಿರ ರೂ. ಮಿತಿಯನ್ನು ತೆಗೆದು ಹಾಕಬೇಕು ಎಂದು ಸಶಸ್ತ್ರ ಪಡೆಗಳು ಬೇಡಿಕೆ ಮಾಡಿದ್ದವು. ಭೂ ಸೇನೆ, ವಾಯುಪಡೆ, ನೌಕಾಪಡೆ ಮುಖ್ಯಸ್ಥರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಇದನ್ನು ಪರಿಶೀಲಿಸುವುದಾಗಿ ಹೇಳಿದ್ದ ನಿರ್ಮಲಾ ಅವರು ನಂತರದಲ್ಲಿ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು ವೆಚ್ಚ ಮಿತಿ ತೆಗೆದುಹಾಕುವಂತೆ ಮನವಿ ಮಾಡಿಕೊಂಡಿದ್ದರು. ಈ ಬೇಡಿಕೆಗೆ ಮಣಿದು ಕೇಂದ್ರ ಸರಕಾರ ಈ ಮಿತಿಯನ್ನು ತೆಗೆದುಹಾಕಿದೆ.
ಮಾತ್ರವಲ್ಲ ಕೇಂದ್ರವು ಈಗ ತನ್ನ ನಿರ್ಧಾರವನ್ನು ಹಿಂಪಡೆದು ಹುತಾತ್ಮ ಯೋಧರ, ಕಾಣೆಯಾದವರ ಹಾಗೂ ಕಾರ್ಯಾಚರಣೆಯಲ್ಲಿ ವಿಕಲ ಚೇತನರಾದವರ ಮಕ್ಕಳ ವಿದ್ಯಾಭ್ಯಾಸ ವೆಚ್ಚವನ್ನು ಪೂರ್ಣವಾಗಿ ಭರಿಸುವುದಾಗಿ ಹೇಳಿಕೆ ನೀಡಿದೆ.
ಸರಕಾರಿ ಅನುದಾನಿತ ಶಾಲೆ, ಶಿಕ್ಷಣ ಸಂಸ್ಥೆ, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು ಹಾಗೂ ಹಣಕಾಸಿನ ನೆರವು ಪಡೆದ ಸ್ವಾಯತ್ತ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗಲಿದೆ.