ಉಡುಪಿ, ಮಾ 23: ಮೀನುಗಾರಿಕಾ, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ಗೆ ಬಿಜೆಪಿ ಪಕ್ಷದವರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ವರಾಜ್ಗೆ ಬಿಜೆಪಿ ನೀಡುತ್ತಿರುವ ಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರಿಂದ ಸಚಿವರಿಗೆ ತೊಂದರೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ಪ್ರಮೋದ್ ಮಧ್ವರಾಜ್ ಅವರನ್ನು ಪಕ್ಷಕ್ಕೆ ಸೆಳೆಯುವ ಯತ್ನವನ್ನು ಕಳೆದ ಮೂರು ವರ್ಷದಿಂದ ಮಾಡುತ್ತಿದ್ದಾರೆ. ಸಚಿವರು ಬೇಡವೆಂದರೂ ಬಿಜೆಪಿ ನಾಯಕರು ಪಕ್ಷ ಸೇರಲು ಚಿತ್ರಹಿಂಸೆ ಕೊಡುತ್ತಿದ್ದಾರೆ. ಸಚಿವರು ಯಾವುದೇ ಕಾರಣಕ್ಕೂ ಬಿಜೆಪಿ ಹೋಗಲ್ಲ. ಅವರು ಹುಟ್ಟು ಕಾಂಗ್ರೆಸ್ಸಿಗ. ಬಿಜೆಪಿಯಿಂದ ಎಷ್ಟೇ ಪರೀಕ್ಷೆಗಳು ಮತ್ತು ಪ್ರಯತ್ನಗಳು ನಡೆದರೂ ಮಧ್ವರಾಜ್ ಯಾವತ್ತೂ ನಮ್ಮ ಜೊತೆಯಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಇರುತ್ತಾರೆ ಎಂದು ತಿಳಿಸಿದ್ದಾರೆ.