ಬಂಟ್ವಾಳ, ಮಾ 22 : ಪುದು ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ರಮ್ಲಾನ್ ಹಾಗೂ ಉಪಾಧ್ಯಕ್ಷರಾಗಿ ಲೀಡಿಯಾ ಪಿಂಟೋ ಅವರು ಆಯ್ಕೆಯಾಗಿದ್ದಾರೆ.ಪುದು ಪಂಚಾಯತ್ ಕಚೇರಿಯಲ್ಲಿ ಗುರುವಾರ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಪಿಡಿಒ ಪ್ರೇಮಾ ಅವರ ಸಹಕರಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರಮ್ಲಾನ್, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಖ್ತರ್ ಹುಸೈನ್, ಬಿಜೆಪಿ ಅಭ್ಯರ್ಥಿಯಾಗಿ ಮನೋಜ್ ಆಚಾರ್ಯ ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೀಡಿಯಾ ಪಿಂಟೊ, ಬಿಜೆಪಿಯ ನಾಗವೇಣಿ ಎಚ್. ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಮ್ಲಾನ್ 21 ಮತಗಳನ್ನು ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಅಖ್ತರ್ ಹುಸೈನ್ 5 ಮತಗಳು, ಮನೋಜ್ ಆಚಾರ್ಯ6 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಲೀಡಿಯೋ ಪಿಂಟೋ ಅವರು 26 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿಯ ನಾಗವೇಣಿ ಎಚ್. 6 ಮತಗಳನ್ನು ಪಡೆದರು.
ಪುದು ಗ್ರಾಮ ಪಂಚಾಯತ್ನಲ್ಲಿ ಒಟ್ಟು ೩೪ ಸದಸ್ಯರನ್ನು ಹೊಂದಿದ್ದು, ಈ ಪೈಕಿ 27 ಕಾಂಗ್ರೆಸ್ ಬೆಂಬಲಿತ ಸದಸ್ಯರು, ೬ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಎಸ್ಡಿಪಿಐಯಿಂದ ಓರ್ವ ಸದಸ್ಯ ಆಯ್ಕೆಯಾಗಿದ್ದರು.
ಈ ಸಂದರ್ಭ ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೆರ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಹಾಜರಿದ್ದರು.
ಇಬ್ಬರು ಗೈರು: ಕಾಂಗೆಸ್ ಬೆಂಬಲಿತ ಅಭ್ಯರ್ಥಿ ಆತಿಕಾ ಉಮ್ರಾ ಪ್ರವಾಸಕ್ಕೆ ತೆರಳಿದ್ದು, ಎಸ್ಡಿಪಿಐ ಅಭ್ಯರ್ಥಿ ನಝೀರ್ ಕೂಡಾ ಗೈರು ಹಾಜರಾಗಿದ್ದರು.
ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಮತ್ತು ಗ್ರಾಮಾಂತರ ಎಸ್ಸೈ ಪ್ರಸನ್ನ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.