ಮೂಡುಬಿದಿರೆ , ಮಾ 22: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕರಿಂಜೆ ಗುಡ್ಡಕ್ಕೆ ಮಾ , 20 ರಂದು ಸುತ್ತಾಡಲೆಂದು ತೆರಳಿದ್ದ ಇಬ್ಬರು ಯುವಕರು ಮಾ. 22 ರಂದು ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಮೂಡಬಿದ್ರೆಯ ಸ್ಥಳೀಯ ನಿವಾಸಿಗಳಾದ ಪ್ರವೀಣ್ ತೌರೋ ಮತ್ತು ಗ್ರೆಷನ್ ಎಂಬವರು ಮೃತ ದುರ್ದೈವಿಗಳು. ಕರಿಂಜೆಯ ಘನತ್ಯಾಜ್ಯ ಘಟಕದ ಬಳಿ ಇವರ ಶವ ಪತ್ತೆಯಾಗಿದ್ದು, ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ಸಂಜೆ ಮೂಡಬಿದ್ರೆಯ ಕರಿಂಜೆ ಗುಡ್ಡಕ್ಕೆ ಬೊಲೆರೊ ವಾಹನದಲ್ಲಿ ಸುತ್ತಾಡಲೆಂದು ತೆರಳಿದ್ದರು. ಎರಡು ದಿನಗಳಾದರೂ ಮನೆಗೆ ಹಿಂತಿರುಗದ ಹಿನ್ನಲೆಯಲ್ಲಿ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಮೂಡುಬಿದಿರೆ ಪೊಲೀಸರು ಹಾಗೂ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂದು ಹುಡುಕಾಟದಲ್ಲಿ ತೊಡಗಿದ್ದರು. ಕರಿಂಜೆ ಗುಡ್ಡದ ತಪ್ಪಲಿನಲ್ಲಿ ಅವರು ನಿಲ್ಲಿಸಿದ್ದ ಬೊಲೆರೊ ಇಂದು ಬೆಳಗ್ಗೆ ಪತ್ತೆಯಾಗಿತ್ತು ಗ್ರೆಶನ್ ಮೂಡುಬಿದರೆ ಪುರಸಭಾ ವ್ಯಾಪ್ತಿಯ ಪೇಪರ್ ಮಿಲ್ ಎಂಬಲ್ಲಿ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದು, ಪ್ರವೀಣ್ ಪಿಕ್ ಅಪ್ ವಾಹನ ಚಾಲಕರಾಗಿ ದುಡಿಯುತ್ತಿದ್ದರು.