ಮಂಗಳೂರು, ಸೆ19: ಸುಮಾರು ಒಂದೂವರೆ ಪುಟದಷ್ಟು ಪತ್ರವನ್ನು ಕಳ್ಳನೊಬ್ಬ ಬರೆದು, ಕದ್ದ ಚಿನ್ನವನ್ನು ಮತ್ತೆ ಅದೇ ಮನೆಯಂಗಳಕ್ಕೆ ಎಸೆದು ಹೋಗಿರುವ ವಿಲಕ್ಷಣ ಘಟನೆ ಮಂಗಳೂರಿನ ಅಡುಮರೋಳಿ ಎಂಬ ಜಾಗದಲ್ಲಿ ನಡೆದಿದೆ.
ನಗರದ ಅಡುಮರೋಳಿಯ ಮಾರಿಕಾಂಬಾ ದೇವಸ್ಥಾನದ ಬಳಿಯ ಶೇಖರ್ ಕುಂದರ್ ಅವರ ಮನೆಯಿಂದ ಶನಿವಾರ ಹಾಡಹಗಲೇ 99 ಪವನು ತೂಕದ ಚಿನ್ನಾಭರಣಗಳು ಮತ್ತು 13,000 ರೂ. ನಗದು ಕಳವಾಗಿತ್ತು. ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕದ್ದ ಚಿನ್ನ ಮತ್ತು ನಗದನ್ನು ಮನೆಯ ಅಂಗಳಕ್ಕೆ ಎಸೆದು ಹೋಗಿದ್ದಾರೆ. ಮನೆಯವರು ಬಾಗಿಲು ತೆರೆದು ನೋಡುವಷ್ಟರಲ್ಲಿ ಬೈಕ್ನಲ್ಲಿದ್ದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮನೆಯಲ್ಲಿದ್ದವರು ಅಂಗಳಕ್ಕೆ ಹೋಗಿ ಕಟ್ಟು ಬಿಚ್ಚಿ ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಶನಿವಾರ ಮನೆಯಿಂದ ಕಳವಾಗಿದ್ದ ಪೂರ್ತಿ ಚಿನ್ನಾಭರಣ ಅದರಲ್ಲಿದ್ದವು. ಜತೆಗೆ ಒಂದು ಕಾಗದದಲ್ಲಿ ನೋಟ್ ಬರೆಯಲಾಗಿತ್ತು.
ಕಳ್ಳ ಬರೆದ ಲೆಟರ್ :
ದಿನಾಂಕ 16-09-2017 ರಂದು ಬೆಳಿಗ್ಗೆ ಸುಮಾರು 12.30ರ ಸಮಯ ನಾನು ಮತ್ತು ನನ್ನ ಸಹಪಾಠಿ ನಾಗುರಿ ಕಡೆಯಿಂದ ಬರುವಾಗ ನನ್ನ ವಾಹನದ ಪೆಟ್ರೋಲ್ ಖಾಲಿಯಾಗಿತ್ತು. ಹೀಗಾಗಿ ಪೆಟ್ರೋಲ್ ತರಲು ಹೋಗುವಾಗ ಅಲ್ಲೇ ರಸ್ತೆಯ ಸಮೀಪದ ಒಂದು ಮನೆಯಲ್ಲಿ ಶಬ್ದ ಕೇಳಿತು. ನೋಡುವಾಗ ಯಾರೋ ನಾಲ್ಕು ಮಂದಿ ಕಂಪೌಂಡ್ ಹಾರಿ ಹೋಗುವುದನ್ನ ಕಂಡೆ, ಅವ್ರಲ್ಲಿ ಕೈಯ್ಯಲ್ಲಿ ಪ್ಲಾಸ್ಟಿಕ್ ಚೀಲಗಳಿದ್ದವು. ಅವರ ಹಿಂದೆ ಹೋಗಿ ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದೆ. ಆಗ ಅವರು ನನಗೆ ಸರಿಯಾಗಿ ಉತ್ತರಿಸದೇ ಚೀಲದಲ್ಲಿ ಏನಿದೆ ಎಂದು ಕೇಳಿದಾಗ ನನಗೆ ಹೊಡೆಯಲು ಬಂದರು. ಆಗ ನಾನು ಬೊಬ್ಬೆ ಹಾಕಿ ಅವರ ಹಿಂದೆ ಓಡಿ ಒಬ್ಬನನ್ನ ಹಿಡಿದಾಗ ಅವನ ಕೈಯ್ಯಲ್ಲಿದ್ದ ಒಂದು ಚೀಲ ನನಗೆ ಸಿಕ್ಕಿತು. ಇನ್ನೊಂದು ಚೀಲದ ಜೊತೆ ಅವರು ತಪ್ಪಿಸಿಕೊಂಡರು. ಆಗ ಚೀಲ ನೋಡಿದಾಗ ಅದರಲ್ಲಿ ಚಿನ್ನವಿತ್ತು. ಹೀಗಾಗಿ ಪೊಲೀಸರಿಗೆ ಒಪ್ಪಿಸಲು ತೀರ್ಮಾನಿಸಿದ್ರೂ ನನಗೆ ದೈರ್ಯ ಬರಲಿಲ್ಲ. ಪೊಲೀಸರು ನನ್ನ ಮೇಲೆಯೇ ಅನುಮಾನ ಪಡುತ್ತಾರೆ ಎಂದು ಅದನ್ನು ಮನೆಗೆ ತೆಗೆದುಕೊಂಡು ಹೋದೆ. ಆದರೆ ರಾತ್ರಿ ನಿದ್ದೆ ಬರಲಿಲ್ಲ. ಹೀಗಾಗಿ ಬೇರೆಯವರ ಚಿನ್ನ ನನಗ್ಯಾಕೆ ಎಂದು ತಿಳಿದು ನಿಮ್ಮ ಮನೆಯಲ್ಲಿ ಇಟ್ಟು ಹೋಗುತ್ತಿದ್ದೇನೆ. ಮತ್ತೊಂದು ನನ್ನ ಕಡೆಯಿಂದ ವಿನಂತಿ. ಇಷ್ಟು ಚಿನ್ನವನ್ನ ಬ್ಯಾಂಕಿನಲ್ಲಿ ಇಡಿ, ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಏಕೆಂದ್ರೆ ಎಲ್ಲೆಡೆಯೂ ಕಳ್ಳರಿದ್ದಾರೆ ಜಾಗೃತೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಮಾಡಿದ ತಪ್ಪಿಗೆ ನನ್ನನ್ನು ಶಿಕ್ಷಿಸಬೇಡಿ. ಹಾಗೆ ಮಾಡಿದ್ರೆ ನಾನು ಮತ್ತು ನನ್ನ ತಾಯಿ ಜೀವ ಕಳೆದುಕೊಳ್ಳಬೇಕಾಗಬಹುದು. ಜಯನಗರ ಬಳಿಯ ಸಿಸಿ ಕ್ಯಾಮಾರ ಚೆಕ್ ಮಾಡಿದ್ರೆ ಸುಳಿವು ಸಿಗಬಹುದು.. ನಮ್ಮದು ತಪ್ಪಾಯಿತು. ಕ್ಷಮಿಸಿ. ಇಷ್ಟೊಂದು ಚಿನ್ನವನ್ನು ಬ್ಯಾಂಕಿನಲ್ಲಿ ಇಡಬೇಕಿತ್ತು. ಮನೆಯಲ್ಲಿ ಯಾಕಿಟ್ಟಿರಿ..? ಇನ್ನಾದರೂ ಜಾಗ್ರತೆ ವಹಿಸಿ ಎಂದು ಕಾಗದದಲ್ಲಿ ಬರೆಯಲಾಗಿದೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವಾದ ಮೂರೇ ದಿನದಲ್ಲಿ ಮತ್ತೆ ವಾಪಾಸ್ ಬಂದಿರೋದು ಮನೆಯವರನ್ನು ಅಚ್ಚರಿಗೆ ತಳ್ಳಿದೆ. ಅಲ್ಲದೇ ಇದರಲ್ಲಿ ಪರಿಚಿತರೇ ಶಾಮೀಲಾಗಿರೋ ಅನುಮಾನವೂ ವ್ಯಕ್ತವಾಗಿದೆ. ಆದ್ರೆ ಪತ್ರ ಬರೆದಿರೋದು ಯಾರು? ಪತ್ರ ಬರೆದವರೇ ಕಳ್ಳತನ ಮಾಡಿದ್ರಾ ಅನ್ನೋ ಗೊಂದಲ ಮನೆಯವರು ಮತ್ತು ಪೊಲೀಸರದ್ದು. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.