ಮಂಗಳೂರು ಮಾ 22: ಮಂಗಳೂರು ಜನತೆಯ ಹಲವಾರು ವರ್ಷಗಳ ಕನಸಾಗಿದ್ದ ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣಕ್ಕೆ ಇಂದು ಶಂಕುಸ್ಥಾಪನೆಯಾಗಲಿದೆ. ಕಬಡ್ಡಿ ಹಾಗೂ ಬಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವು ನಗರದ ಉರ್ವ ಮಾರ್ಕೆಟ್ ಬಳಿ ನಿರ್ಮಾಣಗೊಳ್ಳಲಿದ್ದು ಕಾಮಗಾರಿಯ ನಂತರ ಇದು ’ಮಂಗಳ ಬಾಡ್ಮಿಂಟನ್ ಆಂಡ್ ಕಬಡ್ಡಿ ಸ್ಟೇಡಿಯಂ’ ಎಂದು ಗುರುತಿಸಿಕೊಳ್ಳಲಿದೆ.
ರಾಜ್ಯ ಯುವಜನ ಖಾತೆ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ನೂತನ ಕ್ರೀಡಾಂಗಣಕ್ಕೆ ಇಂದು ಶಿಲಾನ್ಯಾಸಗೈಯಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
6.5 ಕೋ.ರೂ ವೆಚ್ಚದಲ್ಲಿ ಕ್ರೀಡಾಂಗಣವು ನಿರ್ಮಾಣವಾಗಲಿದ್ದು ಇದೀಗ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಜೆ.ಆರ್ ಲೋಬೊರವರ ವಿಶೇಷ ಮುತುವರ್ಜಿಯಿಂದಾಗಿ ನಿರ್ಮಾಣ ಕಾರ್ಯಗಳಿಗೆ ಅನುಮತಿ ದೊರಕಿದೆ. ನಗರದಲ್ಲಿ ಈಗಾಗಲೇ ನಾಲ್ಕು ಬಾಡ್ಮಿಂಟನ್ ಕೋರ್ಟ್ ಗಳನ್ನೊಳಗೊಂಡ ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣವಿದ್ದು , ನೂತನ ಕ್ರೀಡಾಂಗಣವು ನಗರದ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಲಿದೆ.