ಮಾ, 21 : ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಚಿಕ್ಕಮಗಳೂರಿನ ಶಾರದಾಂಬೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಂಪ್ರದಾಯಿಕ ಧಿರಿಸಾದ ಪಂಚೆ ಮತ್ತು ಶಲ್ಯೆ ಉಟ್ಟು ದೇಗುಲ ಭೇಟಿ ಮಾಡಿರುವುದು ವಿಶೇಷವಾಗಿತ್ತು. ಬಳಿಕ ಶೃಂಗೇರಿ ಮಠಕ್ಕೆ ಭೇಟಿ ನೀಡಿದ ರಾಹುಲ್ ಅವರು ಮಠದ ಭಾರತೀತೀರ್ಥ ಸ್ವಾಮೀಜಿ ಜತೆ ಸುಮಾರು ೨೦ ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಹುಲ್ ಸ್ವಾಮೀಜಿಯವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಉಳಿದ ಕಾಂಗ್ರೆಸ್ ನಾಯಕರನ್ನು ಹೊರಗೆ ಕಳುಹಿಸಿದ್ದಾರೆ. ಶ್ರೀಗಳು ಇದೇ ವೇಳೆ ಹಿರಿಯ ಕಾಂಗ್ರೆಸ್ ಮುಖಂಡರ ಭೇಟಿಯ ಹಳೆಯವ ವಿಚಾರವನ್ನು ಮೆಲುಕು ಹಾಕಿದರು. ರಾಹುಲ್ ಅವರ ಅಜ್ಜಿ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಭೇಟಿ ವೇಳೆ ಆಡಿದ ಮಾತುಗಳನ್ನು ಉಲ್ಲೇಖಿಸಿದರು. ಬಳಿಕ ಶೃಂಗೇರಿ ಮಠದ ಶ್ರೀ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದು ಕೆಲ ಕಾಲ ಆಧ್ಯಾತ್ಮ ವಿಚಾರದ ಕುರಿತು ಚರ್ಚೆ ನಡೆಸಿದರು. ಶೃಂಗೇರಿಯ ವೇದ ಪಾಠ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ವೇದ, ಮಂತ್ರಗಳನ್ನು ಕೆಲ ಹೊತ್ತು ಆಲಿಸಿದರು.ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಶೃಂಗೇರಿ ಪಟ್ಟಣದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.