ಕಾರ್ಕಳ ಸೆ19: ಅಕ್ರಮ ಮರಳುಗಾರಿಕೆ ತಡೆಗಟ್ಟುವ ಸಲುವಾಗಿ ತಾಲೂಕು ವ್ಯಾಪ್ತಿಯಲ್ಲಿ ನಾಲ್ಕು ಹೊಸ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ.
ಹೆಬ್ರಿ ಸೋಮೇಶ್ವರ, ಮಾಳ ಕಡಾರಿ, ಸಾಣೂರು ಮುರತ್ತಂಗಡಿ, ಹೊಸ್ಮಾರು ನೂರಾಲ್ಬೆಟ್ಟು ಎಂಬಲ್ಲಿ ಹೀಗಾಗಲೇ ಹೊಸ ಚೆಕ್ ಪೋಸ್ಟ್ ತೆರೆಯಲಾಗಿದ್ದು, ಸದ್ಯದ ದಿನಗಳಲ್ಲಿ ಇದರ ಕಾರ್ಯರಂಭಗೊಳ್ಳಲಿದೆ.
ಇಲ್ಲಿ ಸೀತಾನದಿ,ಶಾಂಭವಿ,ಸುವರ್ಣ ಹೊಳೆ ಹರಿದು ಹೋಗುವ ಇಕ್ಕೆಲೆಗಳಲ್ಲಿ ಹಲವಾರು ಕಡೆ ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಆ ಮೂಲಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೂ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದ್ದರೂ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಮೌನಕ್ಕೆ ಶರಣಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಸ್ಥಾಪಿತ ಹಿತಾಸಕ್ತಿಗಳು ಈ ಜಾಲದಲ್ಲಿ ಸಕ್ರಿಯಾಗೊಂಡಿದ್ದು ಅದರನ್ನು ಹೊರತು ಪಡಿಸಿ ಈ ದಂಧೆಯಲ್ಲಿ ತೊಡಗುವ ಹೊಸ ಮುಖಗಳ ವಿರುದ್ಧ ಮಾತ್ರ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ ಜನಸಾಮಾನ್ಯರ ಅಗತ್ಯಕ್ಕೆ ತಕ್ಕಂತೆ ಮರಳು ಸಿಗದೇ ಪರದಾಡುವಂತಾಗಿದೆ.ಹೀಗಾಗಿ ದುಬಾರಿ ಮೊತ್ತ ಪಾವತಿಸಿ ಮರಳು ಪಡೆಯುವ ದುರ್ಗತಿ ಕರಾವಳಿ ಜಿಲ್ಲೆಗೆ ಎದುರಾಗಿದೆ.
ಮರಳುನೊಂದಿಗೆ ಮಿಶ್ರಣವಾಗುವ ಎಂ ಸ್ಯಾಂಡ್!
ಇನ್ನು ಇಲ್ಲಿ ಅಧಿಕೃತ ಗಣಿಗಾರಿಕೆಗಿಂತ ಅನಧಿಕೃತ ಗಣಿಗಾರಿಕೆ ಹೆಚ್ಚಿದೆ. ಅದರಲ್ಲೂ ಕರಿಕಲ್ಲು ಗಣಿಗಾರಿಕೆಯಿಂದ ತ್ಯಾಜ್ಯ ರೂಪದಲ್ಲಿ ಶೇಖರಣೆಗೊಳ್ಳುತ್ತಿದ್ದ ಜಲ್ಲಿಪುಡಿಯನ್ನು ಸಂಸ್ಕರಿಸಿ ಸಿಗುವ ಪುಡಿಯನ್ನು ಮರಳಿನೊಂದಿಗೆ ಬೆರೆಸುತ್ತಿರುವ ದಂಧೆಯೂ ತಾಲೂಕು ವ್ಯಾಪ್ತಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಇಂತಹ ಮರಳುಗಳು ಸರಕಾರಿ ಮಟ್ಟದಲ್ಲಿ ನಡೆಯುವ ಕಾಮಗಾರಿಗಾರಿಗಳಿಗೆ ಹೆಚ್ಚಾಗಿ ಬಳಸಲಾಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.
ಕರಿಕಲ್ಲು ಗಣಿಗಾರಿಕೆಯಿಂದ ಹೊರತರಲಾಗುತ್ತಿರುವ ಜಲ್ಲಿಪುಡಿಯ ಕುರಿತು ಸಂಬಂಧಪಟ್ಟ ಇಲಾಖೆಗಳು ಗಮನಹರಿಸದಿರುವುದರಿಂದ ಈ ದಂಧೆ ನಿರಂತರವಾಗಿ ಸಾಗಿದೆ, ಪರಿಣಾಮವಾಗಿ ಕಾಮಗಾರಿಯ ಗುಣಮಟ್ಟ ಕಾಪಾಡಲು ಸಾಧ್ಯವಾಗುವುದಿಲ್ಲ.