ಮೂಡುಬಿದಿರೆ, ಮಾ 20 : ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಅಳ್ವಾಸ್ ನ ಮೂವರು ವಾರ್ಡನ್ ಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ಅವರನ್ನು ಸದ್ಯ ನ್ಯಾಯಾಲಯವೂ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಖಾದರ್ ಕೆ. ರಾಜೇಶ್ ಮತ್ತು ನಾಗೇಶ್ ಬಂಧಿತರು. ಹಲ್ಲೆಗೊಳಗಾದ ವಿದ್ಯಾರ್ಥಿ ಪ್ರಜ್ವಲ್ ರಾವ್ ದೂರಿನಂತೆ ಇವರ ಬಂಧನವಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಖುಷಿಯಲ್ಲಿ ಶನಿವಾರ ರಾತ್ರಿ ಆಳ್ವಾಸ್ ನ ಪುಷ್ಪಗಿರಿ ಹಾಸ್ಟೆಲ್ ನಲಿ ವಿದ್ಯಾರ್ಥಿಗಳು ಕಾಲೇಜಿನ ನಿಯಮವನ್ನು ಉಲ್ಲಂಘಿಸಿ ಪಟಾಕಿ ಸಿಡಿಸಿ ಕೇಕೆ ಹಾಕಿ ಸಂಭ್ರಮಿಸಿ ಅಶಿಸ್ತಿನಿಂದ ವರ್ತಿಸಿದ್ದಾರೆ. ಹಾಗೂ ಇದನ್ನು ಪ್ರಶ್ನಿಸಿದ ವಾರ್ಡನ್ ಗಳನ್ನು ವಿದ್ಯಾರ್ಥಿಗಳು ಬೆದರಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲಿಂದ ಕ್ಯಾಂಟೀನ್ ಗೆ ತೆರಳಿದ ವಿದ್ಯಾರ್ಥಿಗಳು ಊಟ ಸರಿ ಇಲ್ಲ ಎಂದು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದರು. ಅತಿರೇಕವಾಗಿ ವರ್ತಿಸಿದ ಕೆಲವು ವಿದ್ಯಾರ್ಥಿಗಳಿಗೆ ವಾರ್ಡನ್ ಗಳು ಬೆತ್ತದಲ್ಲಿ ಥಳಿಸಿದ್ದಾರೆ ಎನ್ನಲಾಗಿದೆ.