ಕಾರ್ಕಳ ಸೆ19: ರಾಜ್ಯ ಮಟ್ಟದಲ್ಲಿ ’ನೈರ್ಮಲ್ಯರತ್ನ’ ಪ್ರಶಸ್ತಿ ಪಡೆದುಕೊಂಡಿದೆ ಕಾರ್ಕಳ ತಾಲೂಕು ಪಂಚಾಯತ್. ಆದರೆ ಅಲ್ಲಿ ಸ್ವಚ್ಚತೆಗೆ ಮಾತ್ರ ನಯಾಪೈಸೆಯ ಬೆಲೆ ಇಲ್ಲ. ಕಾರ್ಕಳ ತಾಲೂಕು ಪಂಚಾಯತ್ ನ ಪಕ್ಕದಲ್ಲೆ ಇರೋ ಸಾರ್ವಜನಿಕ ಶೌಚಾಲಯದ ಬಳಸೋಕೆ ಬಿಡಿ, ಅದರ ಅಸುಪಾಸಿನಲ್ಲಿ ಓಡಾಡೋ ಹಾಗಿಲ್ಲ.ಯಾಕೆಂದರೆ ಹಾಗಿದೆ ಶೌಚಾಲಯದ ಸ್ಥಿತಿ .
ತಾಲೂಕು ಪಂಚಾಯತ್ ಗೆ ಹತ್ತು ಹಲವಾರು ಕಾರಣಗಳಿಂದ ಮೂಲೆ ಮೂಲೆಗಳಿಂದ ಸಾರ್ವಜನಿಕರು, ಅಧಿಕಾರಿಗಳು ಕಚೇರಿಯ ಕೆಲಸ ಗಳಿಗೆಂದು ಬರುತ್ತಾರೆ. ಮಾತ್ರವಲ್ಲದೇ ಸರಕಾರಿ ಸಭೆ ಸಮಾರಂಭಗಳು ಇಲ್ಲಿಯ ಸಭಾಂಗಣದಲ್ಲಿಯೇ ಹೆಚ್ಚಾಗಿ ನಡೆಯುತ್ತಿದ್ದು ಅದರಲ್ಲಿ ಪಾಲ್ಗೊಳ್ಳಲು ವಿವಿಧ ಇಲಾಖೆಗಳ ಸಿಬ್ಬಂದಿಗಳು,ಅಧಿಕಾರಿಗಳು, ತರಬೇತಿ ಪಡೆಯುವವರು, ಜನಪ್ರತಿನಿಧಿಗಳು ಮೊದಲಾದವರು ಅಗಮಿಸುತ್ತಾರೆ, ಅದ್ರೆ ಇಲ್ಲಿ ಬಳಕೆಗೆ ಮಾತ್ರ ಸಮರ್ಪಕವಾದ ಶೌಚಾಲಯ ಇಲ್ಲ.
ಹೀಗಿದೆ ನೋಡಿ ಪಂಚಾಯತ್ ಶೌಚಾಯಲ
ನಾಮಕಸ್ಥೆಗೆ ಶೌಚಾಯಲವೊಂದಿದ್ದು, ಅದರ ಬಾಗಿಲು ಮುರಿಯುವ ಸ್ಥಿತಿಯಲ್ಲಿದೆ. ಒಳ ಒಕ್ಕರೆ ಗಬ್ಬುವಾಸನೆ ಬಡಿಯುತ್ತದೆ. ತ್ಯಾಜ್ಯ ಹರಿದು ಹೋಗುವ ಕೊಳವೆಗೆ ಅಡ್ಡವಾಗಿ ಕುಡಿಯುವ ನೀರಿ ಬ್ಲಾಸ್ಟಿಕ್ ಬಾಟಲಿ ಇರಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ನಾಗರಿಕನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ತಾಲೂಕು ಪಂಚಾಯತ್ ಆಡಳಿತವು ಪ್ರಶಸ್ತಿ ಬಾಚಿಕೊಂಡು ದಿವ್ಯ ನಿರ್ಲಕ್ಷ್ಯ ತೋರಿದೆ.
ಇದರತ್ತ ಧ್ವನಿ ಎತ್ತದ ತಾಲೂಕು ಪಂಚಾಯತ್ ಸದಸ್ಯರು
20 ಮಂದಿ ತಾಲೂಕು ಪಂಚಾಯತ್ ಸದಸ್ಯರುಗಳು, 5 ಮಂದಿ ನಿಯೋಜಿತ ಗ್ರಾಮ ಪಂಚಾಯತ್ ಅಧ್ಯಕ್ಷರು ,5 ಮಂದಿ ಜಿಲ್ಲಾ ಪಂಚಾಯತ್ ಸದಸ್ಯರುಗಳು ಇಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಅವರ ಗಮನಕ್ಕೂ ಈ ವಿಚಾರ ತಿಳಿದರೂ ಯಾವುದೇ ಧ್ವನಿ ಎತ್ತದೇ ಇರುವುದರಿಂದ ಕಳೆದ ಕೆಲವು ತಿಂಗಳುಗಳಿಂದ ಸಮಸ್ಯೆ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ.
ತಾಲೂಕು ಪಂಚಾಯತ್ಗೆ ಅತ್ಯುತ್ತಮ ಪ್ರಶಸ್ತಿ
ರಾಜ್ಯದ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ 2010-11ನೇ ಸಾಲಿನಲ್ಲಿ ಕೊಡಮಾಡಿಕೊಂಡ ಗ್ರಾಮೀಣ ಸ್ವಚ್ಛತೆಯ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾರ್ಕಳ ತಾಲೂಕು ಪಂಚಾಯತ್ಗೆ ನೈರ್ಮಲ್ಯ ರತ್ನ ದ್ವಿತೀಯ ಪ್ರಶಸ್ತಿಯನ್ನು ಮುಖ್ಯಮಂತ್ರಿ ಪ್ರಧಾನ ಮಾಡಿದ್ದರು. ನೈರ್ಮಲ್ಯ ರತ್ನ ಪ್ರಶಸ್ತಿ ಫಲಕ ಹಾಗೂ15 ಲಕ್ಷ ರೂ. ನಗದನ್ನು ನೀಡಿ ಕಾರ್ಕಳ ತಾಲೂಕು ಪಂಚಾಯತ್ಗೆ ಗೌರವಿಸಲಾಗಿತ್ತು.
ಇನ್ನು ಈ ಬಗ್ಗೆ ಪ್ರಶ್ನಿಸಿದರೆ "ಪಾಳುಬಿದ್ದ ಶೌಚಾಲಯ ದುರಸ್ಥಿ ಪಡಿಸುವು ದು ಕಷ್ಟಸಾಧ್ಯ. ಮುಂದಿನ ದಿನಗಳಲ್ಲಿ ನೂತನ ಶೌಚಾಲಯ ನಿರ್ಮಾಣ ದೊಂದಿಗೆ ಶಾಶ್ವತ ಪರಿಹಾರ ಕಲ್ಪಿಸುವುದಕ್ಕೆ ತಾಲೂಕು ಪಂಚಾಯತ್ ಕಟಿಬದ್ಧವಾಗಿದೆ ಎನ್ನುತ್ತಾರೆ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್.