ಬೆಂಗಳೂರು, ಮಾ 19 : ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾಪನೆ ವಿಚಾರವಾಗಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಲ್ಲಿಸಿದ್ದ ವರದಿಯನ್ನು ರಾಜ್ಯ ಸರ್ಕಾರವು ಅಂಗೀಕರಿಸಿದ್ದು ಇದನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಹೀಗಾಗಿ ರಾಜ್ಯದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೊನೆಗೂ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಂತಾಗಿದೆ.
ಸರ್ಕಾರವೂ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ, ವರದಿ ಸಿದ್ದಪಡಿಸುವಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯನ್ನು ನೇಮಿಸಿತ್ತು. ಅದರಂತೆ ಅಧ್ಯಯನ ನಡೆಸಿ ಸಮಿತಿ ಸಲ್ಲಿಸಿದ್ದ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಇಂದು ಸಭೆ ಕರೆದು ಕೊನೆಗೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒಪ್ಪಿಗೆ ನೀಡಿದೆ.
ಆದರೆ ಇದೀಗ ಸರ್ಕಾರ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಲಿಂಗಾಯತರು- ವೀರಶೈವರನ್ನು ಓಲೈಸಲು ಯತ್ನ ಮಾಡುತ್ತಿದ್ದೆಯಾ ಎಂಬ ಪ್ರಶ್ನೆ ಎದ್ದಿದೆ. ಶತಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿದ್ದ ವೀರಶೈವ-ಲಿಂಗಾಯತರನ್ನು ಇದೀಗ ಸರ್ಕಾರ `ಅಲ್ಪಸಂಖ್ಯಾತರು’ ಎಂದು ಪರಿಗಣಿಸಲು ಮುಂದಾಗಿರುವುದು ಬಹುಸಂಖ್ಯಾತ ಹಿಂದೂ ಧರ್ಮೀಯರ ಆಕ್ರೋಶಕ್ಕೆ ಕಾರಣವಾಗಿದೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ , ಈ ವರದಿಯನ್ನು ರಾಜ್ಯ ಸರ್ಕಾರವು ಚುನಾವಣಾ ಹಿನ್ನಲೆಯಲ್ಲಿ ಸೃಷ್ಟಿಸಿದೆ. ಈ ಹಿನ್ನಲೆಯಲ್ಲಿ ಇದರಿಂದ ಯಾರಿಗೂ ಲಾಭವಿಲ್ಲ ಎಂದಿದ್ದಾರೆ