ಮಂಗಳೂರು, ಮಾ. 19: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ. 20ರಂದು ದ.ಕ. ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಈ ಬಗ್ಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಚಿವ ರಮಾನಾಥ ರೈ , ರಾಹುಲ್ ಗಾಂಧಿಯವರು ಮಂಗಳವಾರ ಬೆಳಗ್ಗೆ 11.30 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಕಾಪುಗೆ ತೆರಳುತ್ತಾರೆ. ಅಲ್ಲಿ ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದಾರೆ. 3:30ಕ್ಕೆ ಮುಲ್ಕಿ ಮತ್ತು 4:20ಕ್ಕೆ ಸುರತ್ಕಲ್ನಲ್ಲಿ ಜನಾಶೀರ್ವಾದ ಯಾತ್ರೆ ಭಾಗವಹಿಸಲಿದ್ದಾರೆ.
ಸಂಜೆ 5:20ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ರೋಡ್ ಶೋ ನಡೆಸಲಿದ್ದಾರೆ. 6 ಗಂಟೆಗೆ ನೆಹರೂ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಮತ್ತು ರಾಷ್ಟ್ರದ ನಾಯಕರು ಭಾಗವಹಿಸಲಿದ್ದಾರೆ. 7:30ರ ಬಳಿಕ ನಗರದ ರೊಝಾರಿಯೋ ಚರ್ಚ್, ಕುದ್ರೋಳಿ ದೇವಸ್ಥಾನ, ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ ನಗರದ ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಗ್ಗೆ 8:30ಕ್ಕೆ ಸರ್ಕ್ಯೂಟ್ ಹೌಸ್ನಲ್ಲಿ ಪಕ್ಷದ ಬ್ಲಾಕ್ ಅಧ್ಯಕ್ಷರ ಸಭೆ ಹಾಗೂ 9:30ಕ್ಕೆ ಪಕ್ಷದ ಹಿರಿಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ನಂತರ ಶೃಂಗೇರಿಗೆ ತೆರಳಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ರಾಜಶೇಖರ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.