ಮಾ, 18: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ವಿಜಯಪುರ ಜಿಲ್ಲೆಯ ಬಸವೇಶ್ವರರ ಜನ್ಮಸ್ಥಳದಲ್ಲಿ ಅಧಿಕೃತವಾಗಿ ತಮ್ಮ ಪಕ್ಷ ಭಾರತೀಯ ಜನಶಕ್ತಿ ಕಾಂಗ್ರೆಸ್ ಯ ಚಿಹ್ನೆ ಬಿಡುಗಡೆ ಮಾಡಿದ್ದಾರೆ.ಇನ್ನು ಯುಗಾದಿ ಹಬ್ಬದ ದಿನವೇ ಲೋಗೋ ಬಿಡುಗಡೆ ಮಾಡಿರುವುದು ಹೊಸತೊಂದು ನಿರೀಕ್ಷೆಗೆ ನಾಂದಿ ಹಾಡಿದೆ. ಪಕ್ಷದ ಚಿನ್ಹೆಯಾಗಿ ಬೆಂಡೆಕಾಯಿ ಆಯ್ಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಮಹಾದೇವಪ್ಪ ಉದ್ಗಾವಿ "ಪಕ್ಷವನ್ನು ಮಹಿಳೆ ಅನುಪಮಾ ಶೆಣೈ ಸ್ಥಾಪಿಸಿದ್ದಾರೆ, ಈ ಹಿನ್ನೆಲೆ ಲೇಡಿ ಫಿಂಗರ್ ಅಂದರೆ ಬೆಂಡೆಕಾಯಿಯನ್ನು ಚುನಾವಣೆ ಚಿನ್ಹೆಯಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಲ್ಲದೇ ಬೆಂಡೆಕಾಯಿ ರೈತರಿಗೆ ಚಿರಪರಿಚಿತ, ಪ್ರತಿನಿತ್ಯ ಆಹಾರದಲ್ಲಿ ಬಳಸುವ ತರಕಾರಿ ಆಗಿರುವುದರಿಂದಲೂ ಇದನ್ನು ಆಯ್ಕೆ ಮಾಡಿದ್ದೇವೆ" ಎಂದಿದ್ದಾರೆ.
ಬಳಿಕ ಮಾತನಾಡಿದ ಅನುಪಮಾ ಶೆಣೈ. ತಾನು ಕಾಪು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕಾರ್ಯಕರ್ತರು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಹೇಳಿದರು. ಮೊದಲ ಹಂತದಲ್ಲಿ 80 ಕ್ಷೇತ್ರಗಳನ್ನು ಪ್ರಮುಖವಾಗಿ ಪರಿಗಣಿಸಿದ್ದೇವೆ, ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇರಾದೆ ಇದೆ. ನಾನು ಕೆಲಸ ಮಾಡುವ ಸಂದರ್ಭದಲ್ಲಿ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಹಾಗಾಗಿ ರಾಜಕೀಯ ಪ್ರವೇಶ ಮಾಡಬೇಕಾಯಿತು. ಇದರ ಹಿನ್ನಲೆಯಲ್ಲಿ ರಾಜಕೀಯದಲ್ಲಿ ಪೊಲೀಸ್ ಶಕ್ತಿಯನ್ನು ಬಳಸಿ ಭ್ರಷ್ಟಾಚಾರವನ್ನ ನಿರ್ಮೂಲನೆ ಮಾಡಲು ಇಚ್ಛಿಸುತ್ತೇನೆ. ಸಂವಿಧಾನಕ್ಕೆ ಹೆಚ್ಚು ಒತ್ತುಕೊಟ್ಟು ಜನರಿಗೆ ಮತ್ತು ಸರ್ಕಾರಿ ನೌಕರರಿಗೆ ನೆಮ್ಮದಿ ಜೀವನ ನೀಡುವುದು ನಮ್ಮ ಮುಖ್ಯ ಗುರಿ ಎಂದರು.