ಮಾ,18 : ಪಕ್ಷದ ಟಿಕೆಟ್ ಹಂಚಿಕೆ ಗುತ್ತಿಗೆದಾರರ ಕೈಯಲ್ಲಿದೆ ಎಂದು ಟ್ವೀಟ್ ಮಾಡಿದ್ದ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಇದೀಗ ಕಾಂಗ್ರೆಸ್ ಪಕ್ಷ ನೋಟಿಸ್ ಜಾರಿ ಮಾಡಿದೆ. ಈ ಟ್ವೀಟ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ ಪರಿಣಾಮ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ನಿರ್ದೇಶನದಂತೆ ಕೆಪಿಸಿಸಿ ಶನಿವಾರ ನೋಟಿಸ್ ನೀಡಿದ್ದು , ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.
ಕಾಂಗ್ರೆಸ್ ನಲ್ಲಿರುವ ದುಡ್ಡಿನ ರಾಜಕೀಯಕ್ಕೆ ಅಂತ್ಯ ಹಾಡಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರೊಂದಿಗೆ ಅಪವಿತ್ರ ಸಂಬಂಧ ಹೊಂದಿರುವ ರಾಜ್ಯದ ಪಿಡಬ್ಲ್ಯೂಡಿ ಮಂತ್ರಿ ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಾಧ್ಯವಿಲ್ಲ’ ಎಂಬ ಸಾರಾಂಶದ ಟ್ವೀಟ್ ಮಾಡಿದ್ದ ಪುತ್ರ ಹರ್ಷ ಮೊಯ್ಲಿ ಕಾರ್ಕಳ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು.
ಬಳಿಕ ಟ್ವೀಟ್ ಸಾಕಷ್ಟು ವಿವಾದ ಸೃಷ್ಟಿಸಿದ ಬಳಿಕ ಎಚ್ಚೆತ್ತುಕೊಂಡಿದ್ದ ಮೊಯ್ಲಿ, ಅದನ್ನು ಡಿಲೀಟ್ ಮಾಡಿದ್ದರು. ಅಲ್ಲದೆ, ಆ ಟ್ವೀಟ್ ತಾವು ಮಾಡಿದಲ್ಲ , ನನ್ನ ಖಾತೆ ಹ್ಯಾಕ್ ಆಗಿರಬಹುದು ಎಂಬ ಹೇಳಿಕೆಯನ್ನು ಮಾದ್ಯಮಗಳಿಗೆ ನೀಡಿದ್ದರು. ಆದರೆ, ಟಿಕೆಟ್ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ನ ಹಲವು ನಿಷ್ಠಾವಂತರು ಈ ಟ್ವೀಟ್ನ ಹಿಂದಿನ ವಾಸ್ತವದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಜತೆಗೆ ಪ್ರತಿಪಕ್ಷಗಳಿಗೆ ಈ ಟ್ವೀಟ್ ಟೀಕಾಸ್ತ್ರವಾಗಿ ಪರಿಣಮಿಸಿದೆ.