ಕಾಸರಗೋಡು, ಮಾ 15 : ದೇಶದಲ್ಲಿ ಭ್ರಷ್ಟಾಚಾರಕ್ಕಿಂತ ಕೋಮುವಾದವೇ ಅಪಾಯಕಾರಿಯಾಗಿ ಪರಿಣಮಿಸಿದೆ. ಜಾತಿ ಅಳಿದರೆ ಮಾತ್ರ ಶಾಂತಿ ಸಾಧ್ಯ . ಆದರೆ ಬಿಜೆಪಿ -ಆರ್ ಎಸ್ ಎಸ್ ಶಾಂತಿ ಕದಡಲು ಹೊರಟಿದೆ. ಸುಳ್ಳೇ ಬಿಜೆಪಿಯ ಬಂಡವಾಳ , ಅಧಿಕಾರಕ್ಕಾಗಿ ಯಾವ ರೀತಿಯ ಕುತಂತ್ರಕ್ಕೂ ಬಿಜೆಪಿ ಸಿದ್ದ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಅವರು ಗುರುವಾರ ಶಾಂತಿ ಸೇನಾ ಫೌಂಡೇಶನ್ ವತಿಯಿಂದ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿಸಮಕಾಲೀನ ಸಂಕಟಗಳು ಸಾರ್ವಜನಿಕ ಸಂವಾದಕಾರ್ಯಕ್ರಮದಲ್ಲಿ ಮಾತಿನಿಂ ಸರ್ವ ಸಂಪದವು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗೋವು ಹಾಗೂ ಕೋಮುವಾದದ ಹೆಸರಲ್ಲಿ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಯೋಗಿಗೆ ಜನತೆ ಬುದ್ದಿ ಕಲಿಸತೊಡಗಿದ್ದಾರೆ. ಉಪ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿದೆ. ಯೋಗಿ ಮತ್ತು ಮೋದಿಯ ಸುಳ್ಳು ಭರವಸೆ ಜನರಿಗೆ ಅರ್ಥವಾಗತೊಡಗಿದೆ. ಕೋಮುವಾದ , ಸುಳ್ಳು ಹೇಳಿಕೆ ,ಕೇವಲ ಭರವಸೆಯ ಭಾಷಣ ಮೂಲಕ ಹೆಚ್ಚು ದಿನ ಅಧಿಕಾರಕ್ಕೆ ಬರಲು ಜನತೆ ಅವಕಾಶ ನೀಡಲಾರದು ಎಂದು ಹೇಳಿದರು. ಗಂಗಾ ನದಿ ಸ್ವಚ್ಛಗೊಳಿಸುತ್ತೇವೆಂದು ಭರವಸೆ ನೀಡಿದ್ದ ಸರಕಾರ ಕೇವಲ ದಡವನ್ನಷ್ಟೇ ಸ್ವಚ್ಛಗೊಳಿಸಿದೆ. ದನ, ತೆಂಗಿನಕಾಯಿ ಒಂದು ಪಂಗಡದ್ದು, ಆಡು, ಖರ್ಜೂರ ಮತ್ತೊಂದು ಪಂಗಡದ್ದು ಎಂಬುದಾಗಿ ವಿಂಗಡಿಸಿ ಆಳುವ ನೀತಿಕೇಂದ್ರದ್ದಾಗಿದೆ. ತನಗೆ ಕಾವಿ ಎಂದರೆ ಬಹಳ ಭಕ್ತಿ, ಕಾವಿ ಬಟ್ಟೆಎಂದರೆ ಸ್ವಾಮಿ ವಿವೇಕಾನಂದರ ನೆನಪಾಗುತ್ತದೆ, ಆದರೆ ಅಂತಹ ಕಾವಿ ವಸ್ತ್ರತೊಟ್ಟು ಕೋಮುವಾದಿ ಧೋರಣೆಯನ್ನು ಪ್ರಚುರಪಡಿಸುವ ಉ.ಪ್ರ ಮುಖ್ಯಮಂತ್ರಿಯಿಂದ ಕಲಿಯುವುದು ಏನೇನೂ ಇಲ್ಲ ಎಂದು ಹೇಳಿದರು.
ನನ್ನಲ್ಲೂ ರಾಜಕೀಯ ಇದೆ. ಆದರೆ ನನಗೆ ಚುನಾವಣಾ ರಾಜಕೀಯ ಬೆರೆಯಲು ಮನಸಿಲ್ಲ . ಬಿಜೆಪಿಯನ್ನು ಸೋಲಿಸುವುದಷ್ಟೇ ನನ್ನ ಗುರಿ ಎಂದರು. ಒಬ್ಬ ನಾಯಕನಾಗುವುದಕ್ಕಿಂತ ಒಬ್ಬ ಪ್ರಜೆ ಯಾಗಿ ಗುರುತಿಸಬೇಕಾಗಿದೆ. ಪ್ರಶ್ನಿಸುವವನನ್ನು ಒಂಟಿಯಾಗಿಸುವುದು ಇವರ ಕೆಲಸ , ರೈತರು , ಬಡವರು ಪ್ರಶ್ನಿಸವಂತಿಲ್ಲ . ನಾವು ಚುನಾಯಿಸುವ ಪ್ರತಿನಿಧಿ ತೆಗೆದುಕೊಳ್ಳುವ ಪ್ರತಿಯೊಂದು ನೀತಿ ,ತೀರ್ಮಾನಗಳು ಪ್ರತಿ ಕ್ಷಣದ ಬದುಕಿನಲ್ಲಿ ಪರಿಣಾಮ ಬೀರುತ್ತಿದೆ. ನಮಗೆ ಪ್ರಶ್ನಿಸುವ ಹಕ್ಕು , ಮನಸ್ಸು , ಧೈರ್ಯ ಬೇಕಾಗಿದೆ. ಪ್ರಶ್ನಿಸುವವರನ್ನು ಬಾಯ್ಮಿಚ್ಚಿಸಲಾಗುತ್ತಿದೆ. ನಾವು ಎಲ್ಲಾ ಪ್ರಜೆಗಳು . ಒಟ್ಟಾಗಿ ಪ್ರಶ್ನಿಸಿದಾಗ ಮಾತ್ರ ಜನಪರ ಆಡಳಿತ ಲಭಿಸಲು ಸಾಧ್ಯ ಎಂದರು.