ಮಾ, 15: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ವಿರುದ್ದದ ಕಾರ್ಯಾಚರಣೆಗೆ ತೆರಳುತ್ತಿದ್ದ ವೇಳೆ , ನೆಲಬಾಂಬ್ ಸ್ಪೋಟದಿಂದ ಹುತಾತ್ಮನಾದ ಹಾಸನ ಅರಕಲಗೂಡು ತಾಲೂಕಿನ ಹರದೂರಿನ ಎಚ್. ಎಸ್ ಚಂದ್ರ ಅವರ
ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಜನಪ್ರತಿನಿಧಿಗಳು, ಅಧಿಕಾರಿಗಳು ಅಗೌರವ ಸಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಪ್ರತಿಭಟಿಸಿದ ಇಂದು ಘಟನೆ ನಡೆದಿದೆ. ಅನಾಥ ಶವದ ರೀತಿ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತಿದೆ ಎಂದು ಸಿಟ್ಟುಗೊಂಡಿರುವ ಗ್ರಾಮಸ್ಥರು ಚಂದ್ರ ಅವರ ಕುಟುಂಬದವರ ಜತೆ ಸೇರಿ ಹಾಸನ ಜಿಲ್ಲಾಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಪ್ರತಿಭಟನೆಯಿಂದ ವಿಚಲಿತವಾದ ಜಿಲ್ಲಾಡಳಿತ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ತರಾತುರಿಯ ಸಿದ್ಧತೆ ನಡೆಸಿದೆ. ಈ ಮಧ್ಯೆ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಚಂದ್ರ ಅವರ ಪತ್ನಿ ಪೃಥ್ವಿ ಆಗಮಿಸಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವುದರಿಂದ ಬುಧವಾರದವರೆಗೆ ಅವರಿಗೆ ಚಂದ್ರ ಅವರ ಸಾವಿನ ಸುದ್ದಿ ತಿಳಿಸಿರಲಿಲ್ಲ.
ಸಹೋದರನ ಮನೆಯ ಗೃಹ ಪ್ರವೇಶ ಮುಗಿಸಿ , ಪತ್ನಿಯ ಸೀಮಂತ ಮುಗಿಸಿ ಕರ್ತವ್ಯದ ಕರೆಗೆ ಓಗೊಟ್ಟು ಹೊರಡುವಾಗ ಮಡದಿಗೆ ದೈರ್ಯ ತುಂಬಿ ಹೆರಿಗೆಯ ದಿನ ಬಂದು ಬಿಡುವೆ ಎನ್ನುತ್ತಾ ಹೊರಟ ಯೋಧ ಮರಳಿ ಬಂದಿದ್ದು ಮಾತ್ರ ಹೆಣವಾಗಿ.
ಇದೀಗ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದು, ಜಿಲ್ಲಾಡಳಿತದ ನಡೆ ಕುಟುಂಬವನ್ನು ಇನ್ನಷ್ಟು ನೋಯುವಂತೆ ಮಾಡಿದೆ.