ಮಾ,14: ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯ ಬಾವಿಯೊಂದರಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆಯಾದ ಘಟನೆ ನಡೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆಡಳಿತವು ಸೂಕ್ತ ತನಿಖೆಗೆ ಆದೇಶಿಸಿದೆ.
ಇಲ್ಲಿನ ಶಿಂಧೆ ನಗರದಲ್ಲಿ ಮಾ.11ರಂದು ದೇವಾಲಯವೊಂದರ ಆವರಣದ ಬಾವಿಯನ್ನು ಶುಚಿಗೊಳಿಸುವ ಕೆಲಸದಲ್ಲಿ ಸ್ವಯಂಸೇವಕರಾಗಿದ್ದ ಯುವಕರ ಗುಂಪು ನಿರತರಾಗಿದ್ದ ಸಂದರ್ಭ ಬಾವಿಯೊಳಗೆ ಹಲವು ಪ್ಲಾಸ್ಟಿಕ್ ಚೀಲಗಳು ಸಿಕ್ಕಿತ್ತು. ಕುತೂಹಲಕ್ಕೆ ಅವುಗಳನ್ನು ತೆರೆದು ನೋಡಿದಾಗ ಅಲ್ಲೇ ಪಕ್ಕದ ಲೊಹಾರಾ ಗ್ರಾಮ ನಿವಾಸಿಗಳ ನೂರಾರು ಅಸಲಿ ಆಧಾರ್ ಕಾರ್ಡ್ ಗಳಿರುವುದು ಪತ್ತೆಯಾಗಿದೆ. ಹೆಚ್ಚಿನ ಆಧಾರ್ ಕಾರ್ಡ್ ಗಳ ಮಾಹಿತಿಗಳೆಲ್ಲವೂ ನಾಶವಾಗಿದ್ದರೂ ಕೂಡಾ ಅವುಗಳಲ್ಲಿ ಆಧಾರ್ ಗುರುತಿನ ಸಂಖ್ಯೆ ಗುರುತಿಸಬಹುದಾಗಿದೆ.
ಸದ್ಯ ಈ ಆಧಾರ್ ಕಾರ್ಡ್ ಗಳನ್ನು ತಹಶೀಲ್ದಾರ್ ಸಚಿನ್ ಶೇಜಲ್ ವಶದಲ್ಲಿದ್ದು, ಜಿಲ್ಲಾಧಿಕಾರಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಈ ನಡುವೆ ನಗರದ ಇತರ ಬಾವಿಗಳನ್ನು ಸಹ ಶೋಧಿಸಲು ತಹಶೀಲ್ದಾರರು ನಿರ್ದೇಶಿಸಿದ್ದಾರೆ.