ಮಂಗಳೂರು, ಮಾ 14 : ಕಾಂಗ್ರೆಸ್ ಮುಖಂಡ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅವರನ್ನು ಹುದ್ದೆಯಿಂದ ವಜಗೊಳಿಸಿದ ಬಳಿಕ, ಇದೀಗ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರಿಗೂ ಕಾಂಗ್ರೆಸ್ ಪಕ್ಷದಿಂದ ಶೋಕಾಶ್ ನೋಟೀಸ್ ಜಾರಿ ಮಾಡಲಾಗಿದೆ. ಪಕ್ಷದೊಳಗಿನ ಆಂತರಿಕ ವಿಚಾರವನ್ನು ಮಾಧ್ಯಮಗಳ ಮುಂದೆ ಚರ್ಚಿಸಿ, ಪಕ್ಷದ ವರ್ಚಸ್ಸಿಗೆ ಕುಂದು ಉಂಟುಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಉತ್ತರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಶೋಕಾಸು ನೋಟೀಸು ಜಾರಿ ಮಾಡಿ ಶೀಘ್ರವೇ ಉತ್ತರಿಸುವಂತೆ ಪಕ್ಷ ಸೂಚಿಸಿದೆ.
ಘಟನೆ ಹಿನ್ನಲೆ :
ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಜೊತೆ ಸುರತ್ಕಲ್ ನಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ಚರ್ಚಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್, ಸತ್ತಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಈ ನಡುವೆ, ತಮ್ಮ ವಿರುದ್ದ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಾಗಿ ಆರೋಪಿಸಿ ಆನ್ ಲೈನ್ ಮಾಧ್ಯಮವೊಂದರ ವಿರುದ್ದ, ಸತ್ತಾರ್ ಅವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇವೆಲ್ಲಾ ಬೆಳವಣಿಗೆಗಳ ಬಳಿಕ ಪಕ್ಷದಿಂದ ಪ್ರತಿಭಾ ಕುಳಾಯಿಗೂ ಶೋಕಾಶ್ ನೋಟೀಸ್ ಜಾರಿ ಮಾಡಲಾಗಿದೆ.