ಕಾಸರಗೋಡು, ಮಾ : ಕೇರಳ-ತಮಿಳುನಾಡು ಗಡಿ ಪ್ರದೇಶದ ಥೇಣಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನಿಂದ ಅವಘಡ ನಡೆದು ಹತ್ತಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಹಿನ್ನಲೆಯಲ್ಲಿ ಕೇರಳದಲ್ಲಿ ಚಾರಣ ನಿಷೇಧ ಹೇರಲಾಗಿದೆ. ಬೇಸಿಗೆಯಲ್ಲಿ ಕಾಡ್ಗಿಚ್ಚು ಸಾಧ್ಯತೆ ಹೆಚ್ಚಾಗುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಮುಂದಿನ ಆದೇಶ ತನಕ ಈ ನಿಷೇಧ ಜಾರಿಯಲ್ಲಿರಲಿದೆ. ಕಾಸರಗೋಡಿನ ರಾಣಿಪುರ ಪ್ರವಾಸಿ ಕೇಂದ್ರಕ್ಕೂ ಚಾರಣ ನಿಷೇಧಿಸಲಾಗಿದೆ
ರಾಣಿಪುರ ಪ್ರವಾಸಿ ಕೇಂದ್ರದ ಚಾರಣ , ಅರಣ್ಯ ಸಂದರ್ಶನಕ್ಕಿರುವ ಪ್ರವೇಶ ದ್ವಾರವನ್ನು ಮಂಗಳವಾರದಿಂದ ಬಂದ್ ಮಾಡಲಾಗಿದೆ. ಬಿಸಿಲಿನ ತೀವ್ರತೆಯಿಂದಾಗಿ ಕಾಡ್ಗಿಚ್ಚು ಹರಡುವ ಸಾಧ್ಯತೆ ಹೆಚ್ಚಿದ್ದು, ಅರಣ್ಯ ವಲಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಮಸ್ಯೆಯಾಗುತ್ತಿರುವುದು ಅರಣ್ಯ ವಲಯದ ಪ್ರವೇಶವನ್ನು ಬಂದ್ ಮಾಡಲು ಕಾರಣವಾಗಿದೆ.
ರಾಣಿಪುರ ಪ್ರವಾಸಿ ಕೇಂದ್ರದಿಂದ ಅರಣ್ಯದ ಮೂಲಕ ಎರಡು ಕಿ.ಮೀ. ಟ್ರಕ್ಕಿಂಗ್ ನಡೆಸಿ ಪ್ರವಾಸಿಗರು ಆಕರ್ಷಕವಾದ ಮನಿಮಲೆ ಎಂಬ ಹುಲ್ಲುಗಾವಲಿಗೆ ತಲುಪುತ್ತಾರೆ. ಬೇಸಿಗೆ ಕಾಲದಲ್ಲಿ ಎಕರೆಯಷ್ಟು ಹುಲ್ಲುಗಾವಲು ಒಣಗಿದ್ದು, ಒಂದು ಕಿಡಿ ಬಿದ್ದರೂ ಕೂಡ ಪ್ರದೇಶವಿಡೀ ನಿಮಿಷದೊಳಗೆ ಹೊತ್ತಿ ಉರಿಯಲು ಕಾರಣವಾಗಲಿದೆ
ರಾಣಿಪುರ ಬೆಟ್ಟದ ಸುತ್ತಲೂ ಅರಣ್ಯವಿದೆ. ಒಂದು ಭಾಗದಲ್ಲಿ ಕರ್ನಾಟಕ ಅರಣ್ಯ, ಇನ್ನೊಂದು ಭಾಗದಲ್ಲಿ ಕೇರಳ ರಾಜ್ಯಕ್ಕೊಳಪಟ್ಟ ಅರಣ್ಯ ವಲಯವಿದೆ. ಆದುದರಿಂದ ಅನಾಹುತ ನಡೆದರೆ ಪ್ರವಾಸಿಗರಿಗೆ ಕೂಡಲೇ ಅರಣ್ಯದೊಳಗಿನಿಂದ ಹೊರಗೆ ಹೋಗಲು ಸಾಧ್ಯವಾಗದು. ಅರಣ್ಯದೊಳಗೆ ಹುಲ್ಲುಗಾವಲಿಗೆ ಕಾಡ್ಗಿಚ್ಚು ಉಂಟಾದರೆ ರಕ್ಷಣಾ ಕಾರಾರಯಚರಣೆ ಗೂ ಅಡ್ಡಿಯಾಗಲಿದೆ
ಪ್ರವಾಸಿಗರು ಎಸೆಯುವ ಬೀಡಿ, ಸಿಗರೇಟ್ ತುಂಡುಗಳು, ಬೇಟೆಗಾರರ ತಂಡಗಳು ಅರಣ್ಯ ವಲಯದಲ್ಲಿ ಬೆಂಕಿ ಹರಡಲು ಕಾರಣವಾಗಿವೆ ಎಂದು ಅರಣ್ಯ ಇಲಾಖಾ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷ ಏಳರಷ್ಟು ಸಣ್ಣ ಪ್ರದೇಶಗಳಲ್ಲಿ ಬೆಂಕಿ ಹರಡಿತ್ತು. ಶಾಲೆಗಳಿಗೆ ರಾಣಿಪುರದ ಟ್ರಕ್ಕಿಂಗ್ ನಿಷೇಧದಿಂದಾಗಿ ಅರಣ್ಯ ಇಲಾಖೆಗೆ ಲಕ್ಷಾಂತರ ರೂ. ನಷ್ಟವಾಗಲಿದೆ. ಅರಣ್ಯ ಇಲಾಖೆಗೆ ಒಂದು ತಿಂಗಳಲ್ಲಿ ಒಂದೂವರೆ ಲಕ್ಷ ರೂ .ಗಳಷ್ಟು ಆದಾಯ ಟಿಕೆಟ್ ಮಾರಾಟದ ಮೂಲಕ ಲಭಿಸುತ್ತದೆ. ನಿಷೇಧದಿಂದಾಗಿ ದೂರದ ಸ್ಥಳಗಳಿಂದ ಪ್ರವಾಸಿಗಳ ಬರುವಿಕೆ ಕಡಿಮೆಯಾಗಲಿದೆ. ಕಾಡ್ಗಿಚ್ಚು ಭೀತಿಯಿಂದ ಮಳೆ ಆರಂಭವಾಗುವವರೆಗೆ ಇನ್ನು ಟ್ರಕ್ಕಿಂಗ್ಗೆ ಅನುಮತಿ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ