ಮಂಗಳೂರು, ಮಾ 13: ಕಾವಿ ತೊಟ್ಟ ಸ್ವಾಮೀಜಿಗಳಿಗೆ, ’ರಾಜಕೀಯ’ದತ್ತ ಆಸಕ್ತಿ ಹೆಚ್ಚಾಗುತ್ತಿದ್ದಂತೆ ಕಾಣಿಸುತ್ತಿದ್ದೆ. ಕಾರಣ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಬಳಿಕ ಕರ್ನಾಟಕದಲ್ಲಿ ಅದೇ ಹವಾ ಸೃಷ್ಟಿಯಾದಂತೆ ಕಂಡುಬರುತ್ತಿದೆ, ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ಹಲವು ಸ್ವಾಮೀಜಿಗಳ ಆಸಕ್ತಿ ಹೆಚ್ಚುತ್ತಿದ್ದು, ಉಡುಪಿಯ ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿಗಳು ತಮ್ಮ ರಾಜಕೀಯ ಪ್ರವೇಶವನ್ನು ಈಗಾಗಲೇ ಬಹಿರಂಗಗೊಳಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ದೊರಕದಿದ್ದರೆ, ಪಕ್ಷೇತರನಾಗಿ ಸ್ವರ್ಧಿಸುವುದು ಖಚಿತ ಎಂದು ಶಿರೂರು ಸ್ವಾಮೀಜಿಗಳು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಇವಿಷ್ಟೇ ಅಲ್ಲದೇ ಧಾರವಾಡದ ಮಾನಗುಡಿಯ ಶ್ರೀ ಗುರು ಬಸವ ಮಹಾಮಾನೆ ಮಠದ ಬಸವಾನಂದ ಸ್ವಾಮಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮೊಟಗಿ ಮಠದ ಪ್ರಭು ಚನ್ನಬಸವಸ್ವಾಮೀಜಿ, ಬಸವ ಧರ್ಮ ಪೀಠದ ಮಾತೆ ಮಹಾದೇವಿ, ಸಿದ್ದೇಶ್ವರ್ ಮಠದ ಬಸವರಾಜ ದೇವರು ಮುಂತಾದವರ ಹೆಸರುಗಳು ರಾಜಕೀಯ ಪ್ರವೇಶ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಇವುಗಳಲ್ಲಿ ಯಾರೆಲ್ಲಾ ನಿಜಕ್ಕೂ ರಾಜಕೀಯ ಪ್ರವೇಶಿಸುತ್ತಾರೆ ಅನ್ನೋದಕ್ಕೆ ಇನ್ನು ಸ್ವಲ್ಪ ಸಮಯ ಕಾಯಬೇಕಷ್ಟೇ.