ಭಟ್ಕಳ, ಮಾ 13: ಮಡಿಲಲ್ಲೊಂದು ಮಗುವಿರಲಿ ಎಂದು ಎಷ್ಟೋ ಮಾತೃ ಹೃದಯ ಹಂಬಲಿಸುತ್ತಿದ್ರೆ, ಇಲ್ಲೊಬ್ಬಳು ಮಹಾತಾಯಿ ತಾನೇ ಹೆತ್ತ ಕರುಳಕುಡಿಗೆ ಕೈಯಾರೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಬೀಭತ್ಸ ಘಟನೆ ಇಲ್ಲಿನ ವೆಂಕಟಾಪುರದಲ್ಲಿ ನಡೆದಿದೆ. ಯಶೋದ ಎಂಬಾಕೆಯನ್ನು ಗೋಪಾಲ ಮೊಗೇರ ಎಂಬಾತನೊಂದಿಗೆ ವಿವಾಹ ಮಾಡಿದ್ದು, ಆತ ಆಕೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಈ ಕೊರಗಿನಲ್ಲಿಯೇ ಇದ್ದ ಆಕೆಗೆ ತನ್ನ ಮಗು ಹೆಣ್ಣಾಗಿರುವ ಕುರಿತು ತೀವ್ರ ಬೇಸರವಿದ್ದು, ತಾಯಿ ಮನೆಗೆ ಹೆರಿಗೆಗಾಗಿ ಬಂದಿದ್ದ ಯಶೋದಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ 12 ದಿನದ ನವಜಾತ ಶಿಶುವಿಗೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿದ್ದಾಳೆ.
ಬಳಿಕ ಮಗುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ನೀಡಿ ಆದೇಶಿಸಿದೆ.