ಪುಂಜಾಲಕಟ್ಟೆ, ಮಾ 13: ಆಕಾಶದಿಂದ ಯಂತ್ರವೊಂದು ಉರುಳಿ ಬಿದ್ದರೆ ತಕ್ಷಣಕ್ಕೆ ಅಕ್ಕಪಕ್ಕದಲ್ಲಿದ್ದವರಿಗೆ ಹೇಗಾಗಿರಬಹುದು ಹೇಳಿ. ಇದು ಕಲ್ಪನೆಯಲ್ಲ, ಇಂಥದ್ದೊಂದು ಘಟನೆ ನಡೆದಿದ್ದು ಪುಂಜಾಲಕಟ್ಟೆ ಸಮೀಪದ ಇರ್ವತ್ತೂರಿನಲ್ಲಿ. ಆಕಾಶದಿಂದ ಪ್ಯಾರಾಚೂಟ್ ಸಹಿತ ಅಡಿಕೆ ತೋಟಕ್ಕೆ ಯಂತ್ರವೊಂದು ಉರುಳಿ, ಸಾರ್ವಜನಿಕರಲ್ಲಿ ಗಾಬರಿ ಜತೆಗೆ ಆಶ್ಚರ್ಯ, ಕುತೂಹಲ ಹುಟ್ಟು ಹಾಕಿತ್ತು. ಈ ಯಂತ್ರ ಎಡ್ತೂರಿನ ನಿರಂಜನ್ ಜೈನ್ ಅವರ ತೋಟಕ್ಕೆ ಉರುಳಿ ಬಿದ್ದಿದ್ದು, ತನ್ನ ತೋಟಕ್ಕೆ ನೀರು ಹಾಯಿಸಲೆಂದು ಹೋದಾಗ ಅಡಿಕೆ ಮರದ ಬುಡದಲ್ಲಿ ಈ ಅಪರೂಪದ ಯಂತ್ರ ಕಾಣಸಿಕ್ಕಿದೆ. ನೋಡೋಕೆ ವಾಹನದ ಬ್ಯಾಟರಿಯಂತಿರುವ ಈ ಯಂತ್ರದ ಜತೆಗೆ ಪುಟ್ಟ ಪ್ಯಾರಾಚೂಟ್ ಕೂಡಾ ಅಳವಡಿಸಲಾಗಿದ್ದು, ಅದರ ಪಕ್ಕದಲ್ಲೇ ತಯಾರಿಕಾ ಕಂಪನಿಯ ಹೆಸರನ್ನು ಬರೆಯಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸಿ.ಎನ್ ಪ್ರಭು ಜನರು ಈ ಯಂತ್ರದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇದು ಭಾರತೀಯ ಹವಾಮಾನ ಇಲಾಖೆ ಹವಾಮಾನ ವೈಪರೀತ್ಯವನ್ನು ಮಾಪನ ಮಾಡುವ ಯಂತ್ರ. ಇಲಾಖೆ ಇಂತಹ ಯಂತ್ರಗಳನ್ನು ಆಗಾಗ್ಗೆ ಆಗಸಕ್ಕೆ ರವಾನಿಸುತ್ತಿರುತ್ತದೆ. ಪ್ಯಾರಾಚೂಟ್ ನಲ್ಲಿ ಸಮ್ಸ್ಯೆಯಾದಾಗ ಇದು ಅರಣ್ಯ ಅಥವಾ ಸಮುದ್ರ ಪ್ರದೇಶದಲ್ಲಿ ಬೀಳುತ್ತದೆ. ಆಕಸ್ಮಿಕವಾಗಿ ಇದು ಜನವಸತಿ ಪ್ರದೇಶದಲ್ಲಿ ಬಿದ್ದಿರಬಹುದು ಎಂದಿದ್ದಾರೆ