ಕಾಸರಗೋಡು, ಮಾ 12 : ಪಡಿತರ ಅಂಗಡಿ ಮೂಲಕ ಸಾಮಗ್ರಿ ವಿತರಣೆ ಹೊಸ ವ್ಯವಸ್ಥೆಯಡಿ ಆರಂಭಗೊಂಡಿದ್ದು , ಇ-ಪೋಸ್ ವ್ಯವಸ್ಥೆ ಮೂಲಕ ಪಡಿತರ ಸಾಮಾಗ್ರಿ ವಿತರಣೆಗೆ ಮುಂದಾಗಿದೆ. ಕಾಸರಗೋಡು ಜಿಲ್ಲೆಯ 33 ಪಡಿತರ ಅಂಗಡಿ ಗಳಲ್ಲಿ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಆಹಾರ ಸುರಕ್ಷಾ ಕಾಯ್ದೆ ಜಾರಿಗೆ ತರುವ ಹಿನ್ನೆಲೆಯಲ್ಲಿ ಇ-ಪೋಸ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಮೊದಲ ಹಂತದಲ್ಲಿ ಚೆಮ್ನಾಡ್, ಮೊಗ್ರಾಲ್ ಪುತ್ತೂರು ಮತ್ತು ಕಾಸರಗೋಡು ನಗರಸಭಾ ವ್ಯಾಪ್ತಿಯ 33 ಪಡಿತರ ಅಂಗಡಿಗಳ ಮೂಲಕ ಈ ವ್ಯವಸ್ಥೆ ಮೂಲಕ ಪಡಿತರ ವಿತರಣೆ ನಡೆಯುತ್ತಿದೆ
ಪಡಿತರ ಕಾರ್ಡ್ ಮಾಲಕ ಅಥವಾ ಸದಸ್ಯ ಬಯೋಮೆಟ್ರಿಕ್ ಗುರುತನ್ನು ಇ-ಪೋಸ್ ಮೆಷಿನ್ ನಲ್ಲಿ ದಾಖಲುಪಡಿಸಿದ್ದಲ್ಲಿ ಗ್ರಾಹಕ ಕಾರ್ಡ್ ಗೆ ಲಭಿಸಬೇಕಾದ ಆಹಾರ ಸಾಮಗ್ರಿ ಲಭಿಸಲಿದೆ
ಕಾರ್ಡ್ ಹೊಂದಿದ ಗ್ರಾಹಕನ ಮೊಬೈಲ್ ನಂಬರನ್ನು ಆಧಾರ್ ನೊಂದಿಗೆ ಸೇರಿಸಿರಬೇಕು, ಮೊದಲ ಹಂತದಲ್ಲಿ ಪಡಿತರ ಚೀಟಿಯಲ್ಲಿ ಒಳಗೊಂಡ ಸದಸ್ಯರು ಆಧಾರ್ ಲಿಂಕ್ ಮಾಡದಿದ್ದಲ್ಲಿ ಬಯೋಮೆಟ್ರಿಕ್ ಗುರುತು ದಾಖಲಿಸಿ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು. ಕಾರ್ಡ್ ಮಾಲಕನ ಹೆಸರಲ್ಲಿ ಬಿಲ್ ಲಭಿಸಲಿದೆ. ಶೀಘ್ರ ಬಯೋಮೆಟ್ರಿಕ್ ಅಳತೆ ಮಾಪಕದೊಂದಿಗೆ ಇ-ಪೋಸ್ ಮೆಷಿನ್ ಜೊತೆ ಲಿಂಕ್ ಮಾಡಲಾಗುವುದು. ಇದರಿಂದ ಪಡಿತರ ಚೀಟಿ ಮಾಲಕನಿಗೆ ತಮಗೆ ಲಭಿಸಬೇಕಾದ ಸಾಮಗ್ರಿ ಲಭಿಸಲಿದೆ. ಉದಾಹರಣೆಗೆ ಐದು ಕಿಲೋ ಅಕ್ಕಿ ಪಡಿತರ ಚೀಟಿ ಮಾಲಕನಿಗೆ ಲಭಿಸಬೇಕಾದಲ್ಲಿ ಅಳತೆ ಮಾಪಕದಲ್ಲಿ 4,900 ಗ್ರಾಂ. ದಾಖಲಾದಲ್ಲಿ ಬಿಲ್ ಪಾವತಿಸಲು ಸಾಧ್ಯವಿಲ್ಲ. ಇದು ಗ್ರಾಹಕನಿಗೆ ಅನುಕೂಲವಾಗಲಿದೆ. ಅಳತೆಯಲ್ಲಿ ವಂಚನೆ ಮಾಡಲು ಸಾಧ್ಯವಿಲ್ಲ. ಇದರಿಂದ ಗ್ರಾಹಕನಿಗೆ ಅರ್ಹ ಆಗಿ ಲಭಿಸಬೇಕಾದ ಪಡಿತರ ಸಾಮಾಗ್ರಿ ಲಭಿಸಲಿದೆ.
2018ರ ಮಾರ್ಚ್ 31ರೊಳಗೆ ಎಲ್ಲಾ ಪಡಿತರ ಅಂಗಡಿಗಳಲ್ಲಿ ಇ-ಪೋಸ್ ಮೆಷಿನ್ ಅಳವಡಿಸಬೇಕೆಂದು ಕೇಂದ್ರ ಆಹಾರ ಸರಬರಾಜು ಇಲಾಖೆ ಕಳೆದ ವರ್ಷ ಆದೇಶ ನೀಡಿತ್ತು. ಆದರೆ ಅದರ ಬಳಕೆ, ವಹಿವಾಟು ಮೊದಲಾದ ಹಲವು ಗೊಂದಲದಿಂದ ವಿಳಂಬವಾಗುತ್ತಾ ಸಾಗಿದ್ದು, ಇದೀಗ ಕಾಸರಗೋಡು ಜಿಲ್ಲೆಯ 33 ಪಡಿತರ ಅಂಗಡಿಗಳಲ್ಲಿ ಜಾರಿಗೆ ಬಂದಿದೆ
ಕೇರಳದಲ್ಲಿ 14,334 ಪಡಿತರ ಅಂಗಡಿಗಳಿದ್ದು, ಕಾಸರಗೋಡು ಜಿಲ್ಲೆಯ 33 ಸೇರಿದಂತೆ ರಾಜ್ಯದ 1,334 ಪಡಿತರ ಅಂಗಡಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು ಉಳಿದ 13 ಸಾವಿರ ಪಡಿತರ ಅಂಗಡಿಗಳಲ್ಲಿ ಈ ತಿಂಗಳ ಕೊನೆಯೊಳಗೆ ಅಳವಡಿಸಬೇಕಿದೆ.
ಆದರೆ ಮಾರ್ಚ್ 31ರೊಳಗೆ ಈ ವ್ಯವಸ್ಥೆ ಅಳವಡಿಸದಿದ್ದಲ್ಲಿ ಗ್ರಾಹಕರಿಗೆ ಅರ್ಹ ಪಡಿತರ ಸಾಮಗ್ರಿ ಲಭಿಸದ ಸ್ಥಿತಿ ಉಂಟಾಗಲಿದೆಯೇ ಎಂಬ ಆತಂಕ ಗ್ರಾಹಕರಿಂದಲೂ ಕೇಳಿಬರುತ್ತಿತ್ತು. ಆಹಾರ ಸುರಕ್ಷಾ ಯೋಜನೆಯಡಿ ಎಲ್ಲಾ ಗ್ರಾಹಕರಿಗೂ ಅರ್ಹ ಪಡಿತರ ಲಭಿಸಲು ಈ ಹೊಸ ವ್ಯವಸ್ಥೆ ಯಶಸ್ವಿಯಾಗಲಿದೆಯೇ ಎಂದು ಕಾದುನೋಡಬೇಕಿದೆ.