ಮಂಗಳೂರು, ಮಾ 11: ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ ೩ ದಿನಗಳಲ್ಲಿ ಕೇರಳ ಕರಾವಳಿ ತೀರದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬೋಟುಗಳು ಮೀನುಗಾರಿಕೆಗೆ ತೆರಳದಂತೆ ದ.ಕ. ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಕನ್ಯಾಕುಮಾರಿಯಿಂದ ಕೋಯಿಕ್ಕೋಡ್ ವರೆಗಿನ ಕರಾವಳಿ ತೀರದಲ್ಲಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿ ಸಮುದ್ರ ಅಲೆಗಳ ಎತ್ತರ ಏರಿಕೆಯಾಗುವ ಸಾಧ್ಯತೆ ಇದ್ದು ಅದರ ಪ್ರಭಾವ ಇಲ್ಲೂ ಉಂಟಾಗುವ ಸಾಧ್ಯತೆ ಇರೋದ್ರಿಂದ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಅದೇ ರೀತಿ ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಬೋಟುಗಳು ಸಮುದ್ರದಲ್ಲಿ ಬಲೆಗಳನ್ನು ಹಾಕದಂತೆ ಹಾಗೂ ಅಧಿಕ ಭಾರದ ವಸ್ತುಗಳನ್ನು ಬೋಟಿನ ಡೆಕ್ ಮೇಲೆ ಇಡದಂತೆ ಸೂಚಿಸಲಾಗಿದೆ.
ಸಮುದ್ರದಲ್ಲಿ ಬೋಟುಗಳು ಒಬ್ಬಂಟಿಯಾಗಿ ಮೀನುಗಾರಿಕೆಯಲ್ಲಿ ತೊಡಗುವ ಬದಲು ಹಲವು ಬೋಟುಗಳು ಆಸುಪಾಸಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದರೆ ಅಪಾಯದ ತುರ್ತು ಸಂದರ್ಭದಲ್ಲಿ ನೆರವು ನೀಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಈಗಾಗಲೇ ಮೀನುಗಾರಿಕಾ ಸಂಘಟನೆಗಳಿಗೆ ಈ ಸಂಬಂಧ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.