ಉಡುಪಿ, ಮಾ 11: ಇಲ್ಲಿನ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಶ್ರೀ ಲಕ್ಶ್ಮೀವರತೀರ್ಥ ಶ್ರೀಪಾದರು ರಾಜಕೀಯ ಪ್ರವೇಶ ಮಾಡಲಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ತಾನು ಸ್ಪರ್ಧಿಸುವುದಾಗಿ ಶೀರೂರು ಮೂಲ ಮಠದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಹಿಂದೆಯೇ ನಾನು ಸ್ಪರ್ಧಿಸಲು ಯೋಚಿಸಿದ್ದೆ ಆದರೆ, ಬಳಿಕ ಕಾರಣಾಂತರಗಳಿಂದ ಹಿಂದೆ ಸರಿದಿದ್ದೆ. ಆದರೆ ಈ ಬಾರಿ ಹಾಗಾಗದು. ಬಿಜೆಪಿಯವರು ಟಿಕೆಟ್ ಕೊಟ್ಟರೆ ಅದೇ ಪಕ್ಷದ ಅಭ್ಯರ್ಥಿಯಾಗುವೆ ಅವರು ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸುವೆ ಎಂದಿದ್ದಾರೆ.
ಈ ನಡುವೆ ಪತ್ರಿಕಾಗೋಷ್ಠಿ ನಡೆಸಿದ ನಂತರ ಮದ್ಯಾಹ್ನ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಅವರು ಶೀರೂರು ಮುಖ್ಯಪ್ರಾಣನ ಸನ್ನಿಧಿಯಲ್ಲಿ ಶೀರೂರು ಶ್ರೀಗಳನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ಶ್ರೀಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.ಒಟ್ಟಾರೆಯಾಗಿ ಉಡುಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಕೆದರಿದೆ.