ಮಂಗಳೂರು, ಮಾ 10: ದೇಯಿ ಬೈದ್ಯೆತಿ ಮೂರ್ತಿಗೆ ಅಪಮಾನ ಪ್ರಕರಣವನ್ನು ರದ್ದುಪಡಿಸಲು ಸಲ್ಲಿಸಿದ ಮನವಿಯನ್ನು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ದೇಯಿ ಬೈದ್ಯೆತಿ ಮೂರ್ತಿಗೆ ಅಪಮಾನ ಮಾಡಿದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗೆ ಕಾರಣವಾಗಿತ್ತು. ಬೈದ್ಯೆತಿ ಮೂರ್ತಿಯನ್ನು ಅಶ್ಲೀಲವಾಗಿ ಮುಟ್ಟಿ ಅವಮಾನ ಮಾಡಿದ್ದ ಆರೋಪಿ ಅಬ್ದುಲ್ ಹನೀಫ್ (29) ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಕೆಯಾಗಿತ್ತು.
ಆದರೆ ಈ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬುದಿಹಾಳ್ ಆರ್ ಬಿ ಅವರು ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿಯ ವಿರುದ್ಧ ಎಫ್ಐಆರ್, ಫೋಟೋ ಪುರಾವೆ ಸಹಿತ ದೂರು ದಾಖಲಾಗಿದೆ. ಹೀಗಾಗಿ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಘಟನೆಯ ವಿವರ:
ಪಡುಮಲೆ ಔಷಧಿ ವನದಲ್ಲಿರುವ ವೀರಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿಯ ಮೂರ್ತಿಯ ಪಕ್ಕದಲ್ಲಿ ಬಂಧಿತ ಆರೋಪಿ ಹನೀಫ್ ಕುಳಿತು ಮೂರ್ತಿಯ ಎದೆಯನ್ನು ಮುಟ್ಟುವಂತಹ ಅಶ್ಲೀಲ ಭಂಗಿಯ ಭಾವಚಿತ್ರ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.