ಕಾಸರಗೋಡು, ಮಾ 08 : ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಯನ್ನು ವಿರೂಪಗೊಳಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದ್ದು , ಕೆಲವೇ ಗಂಟೆಗಳ ಅವಧಿಯಲ್ಲಿ ದುಷ್ಕರ್ಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ . ಪರಿಯಾರಂ ಪಳ್ಳಿಕುನ್ನುವಿನ ದಿನೇಶ್ ( 42) ಬಂಧಿತ ಆರೋಪಿಯಾಗಿದ್ದಾನೆ. ಈತ ಬಿಜೆಪಿ ಕಾರ್ಯಕರ್ತನಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ . ಈತನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ತಳಿಪರಂಬದ ತಾಲ್ಲೂಕು ಕಚೇರಿ ಎದುರಿನ ಗಾಂಧಿ ಪ್ರತಿಮೆ ಮೇಲೆ ಹತ್ತಿದ ಈತ ಪ್ರತಿಮೆಯ ಕನ್ನಡಕ ಮತ್ತು ಹಾರ ವನ್ನು ಕಿತ್ತೆಸೆದಿದ್ದು , ಪ್ರತಿಮೆಯನ್ನು ಭಗ್ನಗೊಳಿಸಲು ಯತ್ನಿಸಿದ್ದಾನೆ.
ದುಷ್ಕ್ರತ್ಯವನ್ನು ನಡೆಸಿದ ವ್ಯಕ್ತಿಯ ಫೋಟೋ ವನ್ನು ಅಲ್ಲಿದ್ದವರು ಕ್ಲಿಕ್ಕಿಸಿದ್ದು , ಇದಲ್ಲದೆ ತಾಲ್ಲೂಕು ಕಚೇರಿ ಸಮೀಪದ ಸಿಸಿಟಿವಿಗಳಲ್ಲಿ ದಾಖಲಾಗಿರುವ ದೃಶ್ಯ ವನ್ನು ಕೇಂದ್ರೀಕರಿಸಿ ಪೊಲೀಸರು ನಡೆಸಿದ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. 2005ರಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿ ಸಲಾಗಿತ್ತು. ಕೃತ್ಯದ ಬಗ್ಗೆ ಹಲವು ರಾಜಕೀಯ ಪಕ್ಷ ಗಳು , ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದವು.
ತ್ರಿಪುರದಲ್ಲಿ ಲೆನಿನ್ ಪ್ರತಿಮೆ ಬಳಿಕ ತಮಿಳುನಾಡಿನಲ್ಲಿ ಪೆರಿಯಾರ್ ರವರ ಪುತ್ತಳಿ ಧ್ವಂಸ ಗೊಳಿಸಲಾಗಿತ್ತು. ಉತ್ತರ ಪ್ರದೇಶದ ಮೀರತ್ ನಲ್ಲಿ ಅಂಬೇಡ್ಕರ್ ಪುತ್ಥಳಿ ಯನ್ನು ಕಳೆದ ಮೂರು ದಿನಗಳ ಅವಧಿಯಲ್ಲಿ ಧ್ವಂಸ ಗೊಳಿಸಿದ್ದು, ಇದರ ಬೆನ್ನಿಗೆ ರಾಷ್ಟ್ರಪಿತ ಮಹಾತ್ಮಗಾಂಧಿ ಯವರ ಪುತ್ಥಳಿ ಧ್ವಂಸ ಮಾಡುವ ಹುನ್ನಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು .