ಮಂಗಳೂರು, ಮಾ.8: ಮಹಾನಗರ ಪಾಲಿಕೆಯ ಮೇಯರ್ ಹುದ್ದೆಯ ಅಭ್ಯರ್ಥಿ ಯಾರು ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದ್ದು , ಹಿರಿಯ ಕಾರ್ಪೊರೇಟರ್ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರೊಂದಿಗೆ ಉಪ ಮೇಯರ್ ಹುದ್ದೆಗೆ ಅಭ್ಯರ್ಥಿಯಾಗಿ ಮುಹಮ್ಮದ್ ಕುಂಜತ್ತಬೈಲ್ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಪಾಲಿಕೆ ಸದಸ್ಯರನ್ನು ಹೊರಗುಳಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿತ್ತು ಈ ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ , ಐವನ್ ಡಿಸೋಜ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಭಾಗವಹಿಸಿದ್ದರು. ಈ ಸಭೆಯಲ್ಲಿ ಅಂತಿಮವಾಗಿ ಮೇಯರ್ ಸ್ಥಾನಕ್ಕೆ ಭಾಸ್ಕರ ಮೊಯ್ಲಿ, ಉಪಮೇಯರ್ ಸ್ಥಾನಕ್ಕೆ ಮುಹಮ್ಮದ್ ಕುಂಜತ್ತಬೈಲ್ ಅವರನ್ನು ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಲಾಯಿತು.
ಇನ್ನೊಂದೆಡೆ ಪಾಲಿಕೆಯ ಮೇಯರ್ ಆಗಿರುವ ಕವಿತಾ ಸನಿಲ್ ಹಾಗೂ ಉಪ ಮೇಯರ್ ರಜನೀಶ್ ಅವರ ಅಧಿಕಾರ ಅವಧಿ ಇಂದು ಕೊನೆಗೊಳ್ಳಲಿದೆ. ಹೀಗಾಗಿ ಪೂರ್ವ ನಿಗದಿಯಂತೆ ಇಂದು ಮದ್ಯಾಹ್ನ 11 ಗಂಟೆಗೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.