ಬೆಂಗಳೂರು, ಮಾ 07: ಸಿಎಂ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ಅವರಿಗೆ ಮಂಚ, ಹಾಸಿಗೆ , ತಲೆದಿಂಬು ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದ್ದೆ ಎಂದು ಮಾಜಿ ಪೊಲೀಸ್ ಮಹಾ ನಿರ್ದೇಶಕ ಹೆಚ್.ಎನ್.ಸತ್ಯನಾರಾಯಣ ರಾವ್ ಸ್ಫೋಟಕ ಮಾಹಿತಿ ಹೊರಗೆಡವಿದ್ದಾರೆ.
ಈ ಹಿಂದೆ, ಶಶಿಕಲಾ ವಿಶೇಷ ನ್ಯಾಯಾಲಯದಲ್ಲಿ ಶರಣಾಗಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ, ಕಳುಹಿಸುವ ಸಂದರ್ಭ ಅವರ ಪರ ವಕೀಲರು ಕಾರಾಗೃಹದಲ್ಲಿ ಶಶಿಕಲಾಗೆ ಒಂದನೇ ದರ್ಜೆಯ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದ್ದರು. ನ್ಯಾಯಲಯವೂ ಜೈಲಿನ ಅಧಿಕಾರಿಗಳಿಗೆ ಅವರ ಈ ಮನವಿಯನ್ನು ಪರಿಗಣಿಸುವಂತೆ ಸೂಚನೆ ನೀಡಿತ್ತು . ಆದಾದ ಬಳಿಕ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ನನ್ನನ್ನು ಸಂಪರ್ಕಿಸಿ ನನ್ನ ಸಲಹೆ ಕೇಳಿದಾಗ, ಕರ್ನಾಟಕ ಜೈಲು ಕೈಪಿಡಿ ಸಂಖ್ಯೆ 459 ಪ್ರಕಾರ ಇಂತಹ ಸೌಲಭ್ಯಗಳನ್ನು ಯಾವೊಬ್ಬ ಕೈದಿಗೂ ನೀಡುವಂತಿಲ್ಲ ಎಂದು ಮೆಮೊ ಕೂಡ ಹೊರಡಿಸಿದ್ದೆ ಎಂದು ಸತ್ಯನಾರಾಯಣ ರಾವ್ ಹೇಳಿದ್ದಾರೆ.
ಅಲ್ಲದೆ ಮಹಿಳಾ ಕೊಠಡಿಯ ಮೊದಲನೇ ಮಹಡಿಯಲ್ಲಿ ಒಂದು ಕೊಠಡಿಯಲ್ಲಿ ಅವರನ್ನು ಇರಿಸಲಾಗಿತ್ತು. ಆದಾದ ಒಂದು ತಿಂಗಳು ಕಳೆದ ನಂತರ, ಸಿಎಂ ಸಿದ್ದರಾಮಯ್ಯನವರು ತಮ್ಮ ಖಾಸಗಿ ಸಹಾಯಕ ಪಿಎ ವೆಂಕಟೇಶ್ ಮೂಲಕ ನನ್ನನ್ನು ಕರ್ನಾಟಕ ವಿದ್ಯುತ್ ನಿಗಮ ಅತಿಥಿ ಗೃಹಕ್ಕೆ ಕರೆದು ಶಶಿಕಲಾಗೆ ಯಾವ ರೀತಿಯ ಸೌಲಭ್ಯ ನೀಡಲಾಗುತ್ತಿದೆ ಎಂದು ವಿವರಣೆ ಕೇಳಿ ಪಡೆದು ಸಿಎಂ ಸಿದ್ದರಾಮಯ್ಯನವರು ಶಶಿಕಲಾಗೆ ಜೈಲಿನಲ್ಲಿ ಮಂಚ, ಹಾಸಿಗೆ , ತಲೆದಿಂಬು ಕೊಡುವಂತೆ ಹೇಳಿದರು. ಸರ್ಕಾರಕ್ಕೆ ಈ ವಿಷಯದಲ್ಲಿ ಅಧಿಕಾರುವ ಕಾರಣ ಅವರ ಸೂಚನೆಯಂತೆ ನಡೆದುಕೊಂಡು ಮಂಚ, ಹಾಸಿಗೆ , ತಲೆದಿಂಬು ನೀಡಿದ್ದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಶಶಿಕಲಾ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಆಗಿನ ಡಿಐಜಿ(ಕಾರಾಗೃಹ) ಡಿ.ರೂಪಾ ಆರೋಪಿಸಿ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು.