ಗಂಗೊಳ್ಳಿ, ಮಾ 06: ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಷೇಧಿಸಿರುವ ಮೀನುಗಾರಿಕಾ ವಿಧಾನವನ್ನು ಬಳಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗಂಗೊಳ್ಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಮಂಗಳವಾರ ಮೀನುಗಾರಿಕೆ ಸ್ಥಗಿತಗೊಳಿಸಿ ಬಂದರಿನಲ್ಲಿ ಸೇರಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಎರಡು ಸರಕಾರಗಳು ಬುಲ್ ಟ್ರಾಲಿಂಗ್, ಪೇರ್ ಟ್ರಾಲಿಂಗ್, ನೀರಿನ ಮೇಲೆ ಅಥವಾ ಒಳಗೆ ಯಾವುದೇ ಕೃತಕ ದೀಪ ಬಳಸಿ ಮಾಡುವ ಪರ್ಸೀನ್, ಗಿಲ್ನೆಟ್ ಮೀನುಗಾರಿಕೆಯನ್ನು ನಿಷೇಧಿಸಿವೆ. ಅದನ್ನು ಉಲ್ಲಂಘಿಸುವವರ ಡೀಸಲ್ ಸಹಾಯಧನ ತಡೆ, ಮೀನುಗಾರಿಕಾ ಲೈಸೆನ್ಸ್, ನೋಂದಣಿ ರದ್ದು, ಕಾನೂನು ಕ್ರಮ ಜರಗಿಸಲಾಗುವುದು ಎಂದಿವೆ. ಆದರೆ ಅಕ್ರಮ ಮೀನುಗಾರಿಕೆ ನಡೆಯುತ್ತಿದೆ. ಇದರಿಂದಾಗಿ ಸಾಂಪ್ರದಾಯಿಕ ಮೀನುಗಾರರು ಮತ್ಸ್ಯಕ್ಷಾಮ ಎದುರಿಸುತ್ತಿದ್ದಾರೆ. ಈ ವಿಚಾರವನ್ನು ಈಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಮೀನುಗಾರರ ಬೃಹತ್ ಪ್ರತಿಭಟನೆಯ ವೇಳೆ ಪ್ರಸ್ತಾಪಿಸಲಾಗಿತ್ತು. ಆಗ ನಿಲುಗಡೆಗೊಂಡ ಅಂತಹ ಮೀನುಗಾರಿಕೆ ಈಗ ಮರುಕಳಿಸಿದೆ. ಅದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅನ್ಯ ಕೇಂದ್ರಗಳ ಮೀನುಗಾರರನ್ನೂ ಸೇರಿಸಿಕೊಂಡು ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಇದಕ್ಕೆ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೋಹನ ಖಾರ್ವಿ, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ನಾಗ ಖಾರ್ವಿ, ಬೈಂದೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೆ. ಎಂ. ಸೋಮಶೇಖರ ದನಿಗೂಡಿಸಿದರು.
ಸ್ಥಳಕ್ಕೆ ಆಗಮಿಸಿದ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಇದರ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಉಪ ನಿರ್ದೇಶಕರಿಗೆ ಇದೆ. ವಿಷಯವನ್ನು ಅವರ ಗಮನಕ್ಕೆ ತರಲಾಗುವುದು ಎಂದರೆ ಸಮುದ್ರ ತೀರ ಕಾವಲು ಠಾಣೆಯ ಸಿಬ್ಬಂದಿ ಅಕ್ರಮವನ್ನು ತಡೆಯಲು ಅಗತ್ಯವಿರುವ ಬೋಟ್ ತಮ್ಮ ಬಳಿ ಇಲ್ಲವೆಂದು ಅಸಹಾಯಕತೆ ವ್ಯಕ್ತ ಪಡಿಸಿದರು. ಬಳಿಕ ಆಗಮಿಸಿ, ಮನವಿ ಸ್ವೀಕರಿಸಿದ ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್ ಸಮುದ್ರದಲ್ಲಿ ನಡೆಯುವ ಈ ಅಕ್ರಮ ಚಟುವಟಿಕೆ ತಟರಕ್ಷಣಾ ಪಡೆಯ ವ್ಯಾಪ್ತಿಗೂ ಬರುತ್ತದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗಂಗೊಳ್ಳಿ ತೀರ ಕಾವಲು ಠಾಣೆಗೆ ಬೋಟ್ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಉಪಸ್ಥಿತರಿದ್ದರು.