ಉಡುಪಿ, ಮಾರ್ಚ್ 6: ಕಾಪುವಿನಲ್ಲಿ ನಡೆದ ಬಿಜೆಪಿಯ ಜನ ಸುರಕ್ಷಾ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಕರಾವಳಿಯಲ್ಲಿ ಹಿಂದೂ ಯುವಕರ ಬದುಕಿನ ಪ್ರಶ್ನೆ ನಿರ್ಮಾಣವಾಗಿದೆ. ಕೇಸರಿ ಶಾಲು ಧರಿಸಿದ್ದ ಯುವಕರು ಮತ್ತೆ ವಾಪಸು ಮನೆ ಸೇರುವ ಗ್ಯಾರಂಟಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದೆಲ್ಲವನ್ನೂ ಗಮನಿಸುತ್ತಿರುವ ಗೃಹ ಇಲಾಖೆ ಮಾತ್ರ ಕಂಡು ಕಾಣದಂತೆ ಕಣ್ಮಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಅಧಿಕಾರದಲ್ಲಿರುವ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರಕ್ಕೆ ಹಿಂದೂ ಕಾರ್ಯಕರ್ತರ ಹತ್ಯೆ ಒಂದು ಭಾಗವಾಗಿಬಿಟ್ಟಿದೆ. ಹೀಗಾಗಿಯೇ ಮುಖ್ಯಮಂತ್ರಿಗಳು ಕೂಡಾ ಹತ್ಯೆಗಳ ಬಗ್ಗೆ ಮಾತಾಡುತ್ತಿಲ್ಲ. ಒಂದು ವೇಳೆ ಕಬೀರನ ಹತ್ಯೆ ಆದ್ರೆ ಮರಣೋತ್ತರ ಪರೀಕ್ಷೆಯ ಮೊದಲೇ ಪರಿಹಾರ ಘೋಷಿಸ್ತಾರೆ ಎಂದು ಆರೋಪಿಸಿದರು. ಇಂತಹ ದುರಂಹಕಾರಿ ಮುಖ್ಯಮಂತ್ರಿಯನ್ನು ನಾನು ಈವರೆಗೆ ನೋಡಿಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್ಸಿಗರು ಗೋ ಮಾಂಸ ಭಕ್ಷಿಸಿ , ರಾಜ್ಯದಲ್ಲಿದ್ದ ಗೋಹತ್ಯೆ ಕಾನೂನೂ ವಾಪಸ್ ಪಡೆದು ಅಲ್ಪಸಂಖ್ಯಾತರ ಒಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಕಾಪು ನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದು, ಭಾರತ್ ಮಾತಾಕೀ ಜೈ ಅಂದ್ರೆ ಸಾಕು ಗೂಂಡಾ ಕಾಯ್ದೆ ಹಾಕ್ತಾರೆ. ಆದರೆ ರಾಜರೋಷವಾಗಿ ತಲವಾರು ಹಿಡಿದು ಓಡಾಡೋವರನ್ನು ಕಂಡು ಸುಮ್ಮನಾಗುತ್ತಾರೆ ಎಂದು ಆರೋಪಿಸಿದರು.