ಬಂಟ್ವಾಳ,ಸೆ18: ಶಾಲೆಗಳಿಗೆ ಮಧ್ಯಾವಧಿ ರಜೆಯನ್ನು ನವರಾತ್ರಿ ರಜೆಯನ್ನಾಗಿ ಮಾರ್ಪಡಿಸಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಬಂಟ್ವಾಳ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಅವರು ವಿನಂತಿಸಿದ್ದಾರೆ. ರಾಜ್ಯದಲ್ಲಿ ಮೊದಲಿನಿಂದಲೂ ವಾರ್ಷಿಕ ಮಧ್ಯಾವಧಿ ರಜೆಯನ್ನು ನವರಾತ್ರಿ ಸಮಯದಲ್ಲಿ ನೀಡಲಾಗುತ್ತಿತ್ತು. ಅಂದರೆ ನವರಾತ್ರಿ ಉತ್ಸವ ಮತ್ತು ಮಧ್ಯಾವಽ ರಜೆ ಒಂದೇ ಸಮಯದಲ್ಲಿ ಬರುತ್ತಿತ್ತು. ಅದರಂತೆ ಶಾಲಾ ಮಕ್ಕಳಿಗೆ , ಪೋಷಕರಿಗೆ, ಶಿಕ್ಷಕರಿಗೆ ಕೂಡಾ ನವರಾತ್ರಿ ಸಮಯದಲ್ಲಿ ಮಧ್ಯಾವಧಿ ರಜೆಯಿಂದ ನವರಾತ್ರಿ ಉತ್ಸವದೊಂದಿಗೆ ಹೊಂದಾಣಿಕೆಯಾಗುತ್ತಿತ್ತು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ನವರಾತ್ರಿ ಉತ್ಸವ ಬಂತೆಂದರೆ ಮಕ್ಕಳಂತೂ ಬಹಳ ಸಂತಸ ಪಡೆಯುತ್ತಿದ್ದಾರೆ.
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಮಂಗಳೂರು ದಸರಾ ರಾಷ್ಟ್ರ ವ್ಯಾಪ್ತಿ ಪ್ರಸಿದ್ಧಿ ಪಡೆದಿದ್ದು ಕರಾವಳಿಯ ಜನತೆ ಕುಟುಂಬ ಸಹಿತರಾಗಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ನವರಾತ್ರಿ ಎಂದರೆ, ಹುಲಿ ಕುಣಿತ, ವಿವಿಧ ವೇಷಗಳು ಕರಾವಳಿ ಜಿಲ್ಲೆಯ ವೈಶಿಷ್ಟ ವಾಗಿದೆ. ಇಂತಹ ಸಂದರ್ಭದಲ್ಲಿ ಈ ವರ್ಷ ನವರಾತ್ರಿ ಸಮಯದಲ್ಲಿ ಶಾಲಾ ಪರೀಕ್ಷೆಗಳು ನಡೆಯಲಿದ್ದು ನವರಾತ್ರಿ ಸಂಭ್ರಮದಿಂದ ವಂಚಿತರಾಗಿದ್ದಾರೆ.
ಮೈಸೂರು ಜಿಲ್ಲೆಗೆ ಈಗಾಗಲೆ ದಸರಾ ರಜೆ ಘೋಷಣೆ ಮಾಡಿದ್ದು, ಅದರಂತೆ ಅವಿಭಜಿತ ದ.ಕ.ಜಿಲ್ಲೆಗೆ ನವರಾತ್ರಿ ಸಮಯದಲ್ಲಿಯೇ ಮಧ್ಯಾವಧಿ ರಜೆ ನೀಡುವಂತೆ ದ.ಕ. ಜಿಲ್ಲಾಡಳಿತ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲಲ್ಲಿಸಿದ್ದು, ಈ ಪ್ರಸ್ತಾವನೆಯನ್ನು ವಿಶೇಷವಾಗಿ ಪರಿಗಣಿಸಿ ಮಂಗಳೂರು ದಸರಾ ಪ್ರಯುಕ್ತ ಮಧ್ಯಾವಧಿ ರಜೆಯನ್ನು ನೀಡಬೇಕೆಂದು ಪ್ರಭು ಅವರು ವಿನಂತಿಸಿದ್ದಾರೆ.