ಕುಂದಾಪುರ, ಮಾ 04: ಪ್ರತೀವರ್ಷ ಕುಂದಾಪುರದಲ್ಲಿ ಹೋಳಿ ಹಬ್ಬವನ್ನು ಕೊಂಕಣ ಖಾರ್ವಿ ಸಮಾಜದವರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಒಂದು ವಾರವಿಡೀ ನಡೆಯುವ ಹೋಳಿ ಹಬ್ಬದ ಅಂತಿಮ ದಿನವಾಗಿ ಶನಿವಾರ ಬಣ್ಣದ ಹಬ್ಬವನ್ನಾಗಿ ಆಚರಿಸಲಾಯಿತು. ಹೋಳಿ ಹಬ್ಬದ ಅಂತಿಮ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಇಡೀ ಕುಂದಾಪುರವನ್ನು ಬಣ್ಣಮಯವಾಗಿಸಿದರು.
ಕುಂದಾಪುರದಲ್ಲಿ ನಡೆಯುವ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಕೊಂಕಣ ಖಾರ್ವಿ ಸಮಾಜದವರು ಈ ಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಾರೆ. ಪ್ರತಿಯೊಬ್ಬರು ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಖಾರ್ವಿ ಸಮಾಜದ ದೊಡ್ಡ ಹಬ್ಬವನ್ನಾಗಿ ಹೋಳಿಕಾಮದಹನವನ್ನು ಆಚರಿಸಿ, ಸಂಭ್ರಮ ಪಡುತ್ತಾರೆ.
ಸಾಂಪ್ರಾದಾಯಿಕ ನಂಬಿಕೆ
ಮಂಗಳೂರಿನಿಂದ ಗೋವಾದ ತನಕ ನೆಲೆಸಿರುವ ಕೊಂಕಣ ಖಾರ್ವಿ ಸಮಾಜದವರ ದೊಡ್ಡ ಹಬ್ಬವೆಂದರೆ ಅದು ಹೋಳಿ ಕಾಮದಹನ. ಶಕ್ತಿ ಆರಾಧಕರಾದ ಈ ಜನಾಂಗ ಅತೀವ ಧಾರ್ಮಿಕ ಶೃದ್ದೆಯನ್ನು ಹೊಂದಿರುವ ಸಮುದಾಯ. ಕುಂದಾಪುರದ ಖಾರ್ವಿ ಕೇರಿಯಲ್ಲಿರುವ ಮಹಾಕಾಳಿ ಆರಾಧ್ಯ ದೇವರು. ಇಲ್ಲಿ ನೆಲೆಸಿರುವ ಶ್ರೀ ಮಹಾಕಾಳಿ, ಮಹಾ ಸರಸ್ವತಿ, ಮಹಾಲಕ್ಷ್ಮೀಯಾಗಿಯೂ ಕಂಗೊಳಿಸುತ್ತಾಳೆ. ಹೋಳಿ ಹಬ್ಬ ಆರಂಭವಾಗುವುದು ಹಾಗೂ ಮುಕ್ತಾಯವಾಗುವುದು ಕೂಡಾ ಈ ದೇವಸ್ಥಾನದಲ್ಲಿಯೇ.
ಇಲ್ಲಿ 7 ದಿನಗಳ ಕಾಲ ಹೋಳಿಯನ್ನು ಆಚರಿಸಲಾಗುತ್ತದೆ. ಪ್ರಥಮ ದಿನ ಕುಂದಾಪುರದ ಕುಂದೇಶ್ವರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಹೋಳಿ ಮಾಂಡ್ ಕಾರ್ಯಕ್ರಮ ಮಾಡುತ್ತಾರೆ. ’ಅಡ್ಡೆ ಬೀಳುವುದು’ ಇದರಲ್ಲಿನ ಒಂದು ವಿಶೇಷ ಕಾರ್ಯಕ್ರಮ. ನಂತರ ಆಯಾ ಪ್ರದೇಶದಲ್ಲಿ ಚಂದ್ರನ ಬೆಳಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕೋಲಾಟ, ನೃತ್ಯ, ಹೋಳಿ ಹಾಡುಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.
ರುದ್ರಭೂಮಿಯಿಂದ ಎಲುಬುಗಳ ತರುತ್ತಾರೆ!
ಎರಡನೇ ದಿನವೂ ಅದೇ ರೀತಿ ಕಾರ್ಯಕ್ರಮ ನಡೆಯುತ್ತದೆ. ಹೋಳಿ ಸುಡುವ ಗದ್ದೆಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತದೆ. ೪ನೇ ದಿನ ಹೋಳಿ ಹುಣ್ಣಿಮೆಯಂದು ಹೊಳಿ ಸುಡುವ ಕಾರ್ಯಕ್ರಮ ನಡೆಯುತ್ತದೆ. ಹೋಳಿ ಸುಡುವ ಸಂದರ್ಭ ೫ಸಾವಿರಕ್ಕೂ ಮಿಕ್ಕಿ ಜನ ಭಾಗವಹಿಸುತ್ತಾರೆ. ಇದಕ್ಕೆ ಮುಂಚಿತವಾಗಿ ರುದ್ರಭೂಮಿಗೆ ತೆರಳಲಾಗುತ್ತದೆ. ಅಲ್ಲಿಂದ ಮೂಳೆಗಳನ್ನು ತರಲಾಗುತ್ತದೆ. ಸಣ್ಣ ಮೂಳೆ ತುಂಡುಗಳನ್ನು ಬಿಟ್ಟ ನಂತರ ಹೋಳಿ ಸುಡುವ ವಿಧಿ ವಿಧಾನ ನಡೆಯುತ್ತದೆ.
ಹೋಳಿಯ ಸಂದರ್ಭದಲ್ಲಿನ ಸಶ್ಮಾನ ಭೇಟಿಗೂ ವಿಶೇಷವಾದ ಸಂಬಂಧವಿದೆ. ಹೋಳಿ ಈಶ್ವರ ಪಾರ್ವತಿ ದೇವಿಯವರ ಆರಾಧನೆ. ಸಶ್ಮಾನವಾಸಿಯಾದ ಶಿವನ ಸಂಕೇತವಾಗಿ ರುದ್ರಭೂಮಿಗೆ ಭೇಟಿ ನೀಡುವುದು ಇಂದಿಗೂ ಕಾಣಬಹುದಾಗಿದೆ.
ಕಾಮದಹನದ ಸಂಕೇತ
ಹೋಳಿ ಸುಡುವುದೆಂದರೆ ಕಾಮದಹನ ನೆನಪು ಎಂದರ್ಥ. ಶಿವಪುರಾಣವನ್ನು ಗಮನಿಸುವಾಗ ಮನ್ಮಥನ ದಹನದ ಕಥೆ ನೆನಪಾಗುತ್ತದೆ. ದಕ್ಷ ಪ್ರಜಾಪತಿಯ ಯಾಗದಲ್ಲಿ ಭಸ್ಮವಾಗುವ ದಾಕ್ಷಾಯಿಣಿ, ಇತ್ತ ಶಿವ ವೈರಾಗ್ಯ ತಾಳಿ ತಪಸ್ಸಿನಲ್ಲಿ ನಿರತನಾಗುವುದು, ಶಿವನ ಕೋಪವನ್ನು ತಣಿಸಬೇಕು, ಪಾರ್ವತಿಯ ಜೊತೆ ಕಲ್ಯಾಣ ಮಾಡಬೇಕು ಎಂಬ ದೇವತೆಗಳ ಸಂಕಲ್ಪ, ತಪೋನಿರತನಾದ ಶಿವ ತಪೋಭಂಗ ಮಾಡಲು ಮನ್ಮಥನ ಸಹಾಯ ಕೇಳುವುದು, ಮನ್ಮಥ ಪಂಚಶರದ ಮೂಲಕ ಶಿವನ ಧ್ಯಾನ ಭಂಗ ಮಾಡಿಗಾದ ಕೋಪಗೊಂಡ ಶಿವ ಉರಿಗಣ್ಣು ತೆರೆದು ಮನ್ಮಥನನ್ನು ದಹನ ಮಾಡುತ್ತಾನೆ. ಇದರ ನೆನಪಿಗಾಗಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ.
ಇಡೀ ಕೊಂಕಣ ಖಾರ್ವಿ ಸಮಾಜ ಹೋಳಿ ಮನೆಗೆ ತರಳುತ್ತಾರೆ. ಮರುದಿನ ಅಡಿಕೆ ಮರಕ್ಕೆ ಮುತ್ತೈದೆಯರು ಶೃಂಗಾರ ಮಾಡಿ, ಪಾರ್ವತಿಯಂತೆ ಅಲಂಕಾರ ಮಾಡಿ ಕುಂದೇಶ್ವರ ದೇವಸ್ಥಾನದ ಎದುರು ಇಡಲಾಗುತ್ತದೆ. ಸುರ್ಯೋದಯದ ಸಮಯ ಕುಂದೇಶ್ವರನ ದೃಷ್ಟಿ ಅಡಿಕೆ ಮರದಲ್ಲಿ ಅಲಂಕಾರ ಮಾಡಿದ ಪಾರ್ವತಿಯ ಮೇಲೆ ಬೀಳಬೇಕು ಎನ್ನುವುದು ಇದರ ಆಶಯ. ಶಿವನ ಕೋಪ ತಣಿಯಬೇಕು ಎನ್ನುವ ಉದ್ದೇಶವನ್ನು ಹೋಳಿ ಹಬ್ಬದಲ್ಲಿ ಗಮನಿಸಬಹುದು.
7ನೇ ದಿನವೇ ಬಣ್ಣದ ಹೋಳಿ
ಹೋಳಿಯ 7 ನೇ ದಿನವನ್ನು ಶನಿವಾರ ಬಣ್ಣದ ಹಬ್ಬವನ್ನಾಗಿ ಹೋಳಿಯನ್ನು ಆಚರಿಸಲಾಯಿತು. ಸಾವಿರಕ್ಕೂ ಮಿಕ್ಕಿ ಜನ ಈ ಸಂದರ್ಭ ನೆರೆದಿದ್ದರು. ಖಾರ್ವಿಕೇರಿಯ ಮಹಾಕಾಳಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನ, ದೇವಿಯ ಎದುರಿಗೆ ವಿವಿಧ ಬಣ್ಣಗಳನಿಟ್ಟು ದೇವಿಗೆ ಅರ್ಪಣೆ, ದೇವಿಗೆ ಬಣ್ಣ ಹಚ್ಚುವ ಮೂಲಕ ಬಣ್ಣದ ಹಬ್ಬಕ್ಕೆ ವಿದ್ಯುಕ್ತ ಚಾಲನೆಯನ್ನು ಮಹಕಾಳಿ ದೇವಸ್ಥಾನದಲ್ಲಿ ಮಾಡಲಾಯಿತು. ನಂತರ ವೈಭವದ ಮೆರವಣಿಗೆ ನಡೆಯಿತು.
ಬಣ್ಣ ಬಣ್ಣದ ನವರಂಗಿನಲ್ಲಿ ಇಡೀ ಕುಂದಾಪುರ ರಂಗುರಂಗಾಗಿ ಕಂಡು ಬಂತು. ಎತ್ತ ನೋಡಿದರೂ ಬಣ್ಣದ ಓಕುಳಿ, ಅದ್ಭುತ ಉತ್ಸಾಹ, ಹಾಡು, ಕುಣಿತಗಳ ಜೋಸ್. ಒಟ್ಟಾರೆಯಾಗಿ ಹೋಳಿ ಹಬ್ಬ ಕುಂದಾಪುರದಲ್ಲಿ ವೈಭವಯುತವಾಗಿ ಸಂಪನ್ನ ಗೊಂಡಿತು.