ಮಂಗಳೂರು, ಮಾ 04 : ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು , ಪ್ರಸಕ್ತ ಚುನಾವಣೆಗೆ ಇನ್ನೂ ಕೂಡಾ ಅರ್ಹ ಮತದಾರರಿಗೆ , ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ ಎಂದು ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆ ನಡೆಯುವ 7 ದಿನಗಳ ಮೊದಲಿನವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಗೊಳಿಸಲು ಅವಕಾಶವಿದೆ ಎಂದರು. ಜಿಲ್ಲೆಯಲ್ಲಿ 9280 ವಿಶೇಷ ಚೇತನ ಮತದಾರರಿದ್ದಾರೆ ಅಲ್ಲದೆ ಇನ್ನೂ 262 ಜನ ಮತದಾರರನ್ನು ಸೇರ್ಪಡೆಗೊಳಿಸಲು ಬಾಕಿಯಿದೆ. ಇವರಿಗಾಗಿ ಅನೂಕೂಲಕರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಇವಿಎಂ ಮತಯಂತ್ರಗಳ ಪರೀಶೀಲನೆಗಾಗಿ ದಿಲ್ಲಿಯಿಂದ 16 ಜನ ತಜ್ಞರು ಆಗಮಿಸಿದ್ದು , ಇನ್ನು 10 ದಿನಗಳ ಕಾಲ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಅವರು ಪರಿಶೀಲನೆ ನಡೆಸಲಿದ್ದಾರೆ ಎಂದರು .
ದ. ಕ ಜಿಲ್ಲೆಯಲ್ಲಿ ಈವರೆಗೆ 22,513 ಜನ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ 8,20,764 ಪುರುಷ , ಹಾಗೂ8,46,056 ಮಹಿಳೆಯರು ಸೇರಿ 16,66,814 ಮತದಾರರಿದ್ದಾರೆ. ಈ ಪೈಕಿ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ 1790 ಮತಗಟ್ಟೆಗಳಿವೆ. ಇವೆಲ್ಲವೂ ಸರಕಾರಿ ಕಟ್ಟಡಗಳಲ್ಲೇ ಕಾರ್ಯಾಚರಿಸುತ್ತಿದೆ. ಈ ಪೈಕಿ ಕಟ್ಟಡ ಶಿಥಿಲಗೊಂಡಿರುವ , ನೀರಿನ ಸೌಲಭ್ಯ ಇತ್ಯಾದಿ ಸೌಕರ್ಯಗಳಲ್ಲಿ ಕೊರತೆ ಇರುವ 37 ಮತಗಟ್ಟೆಗಳನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದವರು ಹೇಳಿದರು.