ಮಂಗಳೂರು, ಮಾ 3: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಬಸ್ಸುಗಳ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್ ನೀಡಬೇಕು ಎಂದು ಪೊಲೀಸ್ ಕಮಿಷನರ್ ಟಿ. ಆರ್ ಸುರೇಶ್ ಹೇಳಿದ್ದಾರೆ.
ಕಮಿಷನರ್ ಕಛೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರು ನಗರದ ಖಾಸಗಿ ಬಸ್ ಗಳಲ್ಲಿ ಟಿಕೆಟ್ ನೀಡದಿರುವ ಕುರಿತು ದೂರು ನೀಡಿದ್ದಾರೆ. ಮಂಗಳೂರಿನಲ್ಲಿ ಸಂಚರಿಸುವ ನರ್ಮ್ ನಗರ ಸಾರಿಗೆ ಬಸ್ ಗಳಲ್ಲಿ ಮಾತ್ರ ಸರಿಯಾಗಿ ಟಿಕೆಟ್ ನೀಡುತ್ತಾರೆ. ಆದರೆ ಖಾಸಗಿ ಬಸ್ ಗಳಲ್ಲಿ ಟಿಕೆಟ್ ನೀಡುವುದು ಕಡಿಮೆ. ಒಂದು ವೇಳೆ ಟಿಕೆಟ್ ಕೇಳಿದರೆ ಉಡಾಫೆಯಿಂದ ವರ್ತಿಸುತ್ತಾರೆ ಎಂದು ದೂರಿದರು.
ಈ ವೇಳೆ ಪ್ರತಿಕ್ರಿಯಿಸಿದ ಟಿ. ಆರ್ ಸುರೇಶ್ ಖಾಸಗಿ ನಗರ ಸಾರಿಗೆ ಬಸ್ ಗಳಲ್ಲಿ ಟಿಕೆಟ್ ನೀಡದೇ ಇರುವುದು ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ವ್ಯವಸ್ಥೆ ಮಾಡಿದ್ದರೂ ಸಮಸ್ಯೆ ಮರುಕಳಿಸುತ್ತಿದೆ. ಶೀಘ್ರ ಕಾರ್ಯಾಚರಣೆ ಪ್ರಾರಂಭಿಸುತ್ತೇವೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಅಂತಹ ಬಸ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.