ಕುಂದಾಪುರ, ಸೆ18: ಇದೊಂದು ಕುಗ್ರಾಮ. ಈ ಗ್ರಾಮದ ಜನರಿಗೆ ಸೇತುವೆಯ ಸಮಸ್ಯೆಯೊಂದು ಕಾಡುತ್ತಿದೆ. ಕಳೆದ ಎರಡು ದಶಕಗಳಿಂದ ಈ ಗ್ರಾಮದ ಬಡ ಜನರು ಸೇತುವೆ ಭಾಗ್ಯ ಕಲ್ಪಿಸಿ ಕೊಡಿ ಎಂದು ಮನವಿಗಳ ಮೇಲೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಇವರ ಸಮಸ್ಯೆ ಊರಿನ ಜನಪ್ರತಿನಿಧಿಗಳಿಗೆ ಮಹಾ ಸಂಗತಿಯೇ ಅಲ್ಲ. ಅನೇಕ ವರುಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಸರಕಾರ ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ಕೂಗು ಕೇಳಿ ಬಂದಿದೆ.
ಕುಗ್ರಾಮದ ಜನ ಬೇಡಿಕೆ ಇಟ್ಟಿರುವುದು ಹಟ್ಟಿಕುದ್ರು-ಬಸ್ರೂರು ಸಂಪರ್ಕ ಸೇತುವೆಗೆ. ಹಟ್ಟಿಕುದ್ರು ಹಾಗೂ ಬಸ್ರೂರು ನಡುವೆ ಅಂತರ ಕೇವಲ ನೂರು ಮೀಟರ್. ಸುಮಾರು 300ಕ್ಕೂ ಹೆಚ್ಚು ಮನೆಗಳು ಇಲ್ಲಿದೆ. ಮೂರು ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಈ ಊರು ಪ್ರಾಕೃತಿಕವಾಗಿ ಸಮೃದ್ಧಿಯಾಗಿದೆ. ಆದರೆ ಮಳೆಗಾಲದ ನಾಲ್ಕು ತಿಂಗಳು ಕಳೆಯುವುದೆಂದರೆ ಇವರಿಗೆ ಸಾಹಸ ಮಾಡಿದ ಹಾಗೆ. ನದಿಯ ನಡುವಿನ ಕುದ್ರುವಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಜನರ ಸಂಪರ್ಕ, ಸಂಚಾರ ವ್ಯವಸ್ಥೆಗೆ ದೋಣಿಯೇ ಗತಿಯಾಗಿದೆ. ಪ್ರತಿ ನಿತ್ಯ ಹಟ್ಟಿಕುದ್ರುವಿನಿಂದ ಹಾಲಾಡಿ ಹೊಳೆಯನ್ನು ದಾಟಿ ಬಸ್ರೂರು ತಲುಪಬೇಕಾದ ಅನಿವಾರ್ಯತೆ ಇದೆ. ಸುಮಾರು 150 ರಿಂದ 160 ಮಂದಿ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಈ ಹೊಳೆಯನ್ನು ದೊಣಿ ಮೂಲಕ ದಾಟಿಕೊಂಡು ಬಸ್ರೂರಿಗೆ ಬರುತ್ತಿದ್ದಾರೆ. ಮಳೆಗಾಲದಲ್ಲಂತೂ ಮಳೆ ಜೋರಾದಲ್ಲಿ ಇವೆರೆಲ್ಲರಿಗೂ ಶಾಲಾ ಕಾಲೇಜುಗಳಿಗೆ ರಜೆ. ಅಲ್ಲದೇ ಕೃಷಿ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಬಸ್ರೂರನ್ನೇ ಅವಲಂಬಿಸಿರುವುದರಿಂದ ದೋಣಿಯಲ್ಲಿ ನಿತ್ಯ ಪಯಣದ ಕಾಯಕವನ್ನಾಗಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಬಹುತೇಕ ನದಿಗಳಿಗೆ ಸಂಪರ್ಕ ಸೇತುವೆಯನ್ನು ನಿರ್ಮಿಸಿದ್ದರೂ ಈ ಭಾಗದ ಜನರ ಒತ್ತಾಸೆ ಇನ್ನೂ ಕೂಡಾ ಈಡೇರಿಲ್ಲ. ಇಲ್ಲಿನ ಜನರ ನೆಮ್ಮದಿಯೇ ಮಾಯವಾಗಿದ್ದು ಅಭದ್ರ ಬಾವನೆಯಿಂದ ತೊಳಲಾಡುವಂತಾಗಿದೆ.
ಹಟ್ಟಿಕುದ್ರುವಿನ ಜನತೆ ದೈನಂದಿನ ಎಲ್ಲಾ ಕಾರ್ಯಗಳಿಗೆ ಬಸ್ರೂರನ್ನೆ ಅವಲಂಬಿತರಾಗಿದ್ದಾರೆ. ನೂರು ಮೀಟರ್ ದೂರದಲ್ಲಿರುವ ಬಸ್ರೂರು ಪೇಟೆಗೆ ಆಸ್ಪತ್ರೆ, ಪಡಿತರ, ಶಿಕ್ಷಣಕ್ಕೆ ಬರಬೇಕಾದ ಇವರು ಹೆಚ್ಚಾಗಿ ದೋಣಿಯನ್ನೇ ಅವಲಂಬಿಸಿದ್ದಾರೆ. ಈ ಹಿಂದೆ ದ್ವೀಪವಾಗಿದ್ದ ಹಟ್ಟಿಕುದ್ರುವಿಗೆ 2004ರಲ್ಲಿ ಹಟ್ಟಿಯಂಗಡಿ - ಹಟ್ಟಿಕುದ್ರು ಸಂಪರ್ಕಿಸುವ ಸೇತುವೆ ನಿರ್ಮಾಣವಾಗಿತ್ತು. ಆದರೆ ಈ ಸೇತುವೆ ಮೂಲಕ ಹಟ್ಟಿಯಂಗಡಿಗೆ ಹೋಗಿ ಮತ್ತೆ ಕುಂದಾಪುರ-ಬಸ್ರೂರು ಸುತ್ತು ಬಳಸಿ ತಲುಪಬೇಕಾದ ಅನಿವಾರ್ಯತೆ ಇಲ್ಲಿನ ಜನರದು. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಸುತ್ತು ಬಳಸಿ ಹೋಗಲು ಜನರು ಈ ಬಗ್ಗೆ ಆಸಕ್ತಿ ಕಳೆದುಕೊಂಡು ತಮ್ಮ ನಿತ್ಯ ಪ್ರಯಾಣಕ್ಕೆ ದೋಣಿಯನ್ನೇ ಅವಲಂಬಿತರಾಗಿದ್ದಾರೆ. ಹೀಗೆ ಮರಳುಗಾರಿಕೆಯ ಹೊಡೆತದಿಂದ ತತ್ತರಿಸಿ ಹೋಗಿದ್ದ ಹಟ್ಟಿಕುದ್ರು ಮೂಲ ಸೌಕರ್ಯದ ಕೊರತೆಯಿಂದ ಬಹಳಷ್ಟು ಹಿನ್ನಡೆಯನ್ನು ಕಂಡುಕೊಂಡಿದೆ.
ಹಟ್ಟಿಕುದ್ರುವಿನಿಂದ ಬಸ್ರೂರಿಗೆ ಪ್ರತಿನಿತ್ಯ ಸುಮಾರು 150ರಷ್ಟು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ದೋಣಿಯಲ್ಲಿಯೇ ಪಯಣಿಸುತ್ತಿದ್ದಾರೆ. ಮಳೆಗಾಲದ ಮೂರು ತಿಂಗಳು ಕಳೆಯುವುದೇ ಬಹಳಷ್ಟು ಕಷ್ಟಕರವಾಗಿದೆ. ಒಂದು ವೇಳೆ ಜೋರಾಗಿ ಮಳೆ ಬಂದಲ್ಲಿ ಆ ದಿನ ವಿದ್ಯಾರ್ಥಿಗಳಿಗೆ ಶಾಲೆಗೆ ರಜೆ. ಅನಾರೋಗ್ಯ ಪೀಡಿತರು, ಗರ್ಭಿಣಿ ಸ್ತ್ರಯರು ಬಹಳಷ್ಟು ಅಪಾಯಕಾರಿಯಾಗಿ ದೋಣಿ ಪ್ರಯಾಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿದಿಗಳು ಈ ಕುದ್ರು ಜನರಿಗೆ ಆಸರೆಯಾಗಬೇಕಿದೆ.