ಮಂಗಳೂರು, ಮಾ 2: ಬಿಜೆಪಿ ಪಕ್ಷದ ಜನಸುರಕ್ಷಾ ಯಾತ್ರೆ ಕೇವಲ ಢೋಂಗಿ ರಾಜಕಾರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಒಂದು ವೇಳೆ ಬಿಜೆಪಿ ಪಕ್ಷದವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಭಟ್ಕಳದಿಂದ ಯಾತ್ರೆ ಆರಂಭಿಸಲಿ ಎಂದು ಅವರು ತಿಳಿಸಿದರು.
ಬಿಜೆಪಿಯವರು ಮೋಸ ಮತ್ತು ಅಧಿಕಾರ ದಾಹದಿಂದ ಈಗ ಯಾತ್ರೆ ಹೊರಟಿದ್ದಾರೆ. ಭಟ್ಕಳ ಬಿಜೆಪಿ ಶಾಸಕ ಚಿತ್ತರಂಜನ್ ಕೊಲೆ ಪ್ರಕರಣದಲ್ಲಿ ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಭಟ್ಕಳದಲ್ಲಿ ನಡೆದ 21 ಜನರ ಕೊಲೆ ಪ್ರಕರಣವನ್ನು ಈವರೆಗೂ ಭೇದಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಜನರಿಗೆ ರಾಷ್ಟ್ರೀಯ ಪಕ್ಷಗಳ ಬಗ್ಗೆ ಭ್ರಮನಿರಸನ ಇದೆ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶಿವಸೇನೆ ಇತಿಹಾಸ ನಿರ್ಮಿಸುವ ವಿಶ್ವಾಸ ಇದೆ. ಶಿವಸೇನೆಯಡಿ ರಾಜ್ಯ ವಿಧಾನ ಸಭಾ ಚುನಾವಣೆಗೆ ಕಣಕ್ಕಿಳಿಯುತ್ತೇವೆ. ಈಗಾಗಲೇ 52 ಕಡೆ ಸ್ಪರ್ಧಿಸಲು ತಯಾರಿ ನಡೆಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.