ಪಡುಬಿದ್ರಿ, ಮಾ 01: ಪಡುಬಿದ್ರಿ ಸಮೀಪದ ಕಾಂಜರಕಟ್ಟೆ ಎಂಬಲ್ಲಿ ರೌಡಿಶೀಟರ್ ನವೀನ್ ಡಿಸೋಜಾ ಎನ್ನುವವನನ್ನು ಬರ್ಬರವಾಗಿ ಮಾರಕಯುಧಗಳಿಂದ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳನ್ನ ಪತ್ತೆ ಹಚ್ಚಲು ಉಡುಪಿ ಪೊಲೀಸರು ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಕಾರ್ಕಳ ಹಾಗೂ ಪಡುಬಿದ್ರಿ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ನವೀನ್ ಡಿಸೋಜರಿಗೆ ಹಲವು ಜೀವ ಬೆದರಿಕೆ ಇತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೂಡ ಪೊಲೀಸ್ ತನಿಖೆ ತೀವ್ರಗೊಂಡಿದ್ದು ,ಬೇರೆ ಬೇರೆ ಅಯಾಮಗಳಲ್ಲಿ ತನಿಖೆ ಮುಂದುವರೆಯುತ್ತಿದ್ದು ಆರೋಪಿಗಳ ಪತ್ತೆಗಾಗಿ ಮೂರು ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಧಿಕಾರಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
ಘಟನೆಯ ವಿವರ
ಫೆ. 28 ರ ಬುಧವಾರ ತಡ ರಾತ್ರಿ ಸುಮಾರು 10 ಗಂಟೆಗೆ , ಪಡುಬಿದ್ರಿ ಸಮೀಪದ ಸಾಂತೂರು ಗ್ರಾಮದ ಕಾಂಜರಕಟ್ಟೆಯ, ಗ್ಲೋರಿಯ ಬಾರೊಂದರಲ್ಲಿ ರೌಡಿ ಶೀಟರ್ ನವೀನ್ ಡಿಸೋಜ ಹಾಗೂ ಅತನ ಗೆಳೆಯರು ಗುಂಡು ಪಾರ್ಟಿ ಮುಗಿಸಿ ಹೊರಬಂದು ಬೈಕ್ ಎರುತ್ತಿದ್ದಂತೆ, ಕಾರಿನಲ್ಲಿ ಕಾದು ಕುಳಿತಿದ್ದ ತಂಡವೊಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ.ಈ ಸಂಧರ್ಭದಲ್ಲಿ ಮೂವರು ಬೈಕಿನಿಂದ ಕೆಳ ಬೀಳುತ್ತಿದ್ದಂತೆ, ಕಾರಿನಿಂದ ಹೊರ ಬಂದ ದುಷ್ಕರ್ಮಿಗಳು ರೌಡಿ ಶೀಟರ್ ಮೇಲೆ ಮಾರಕಯುಧಗಳಿಂದ ದಾಳಿ ನಡೆಸಿ ಕಾರಿನಲ್ಲಿ ಪರಾರಿಯಾಗಿದ್ದರು. ನವೀನ್ ಡಿಸೋಜ ಕುತ್ತಿಗೆ ಭಾಗ ಹಾಗೂ ಕೈಗಳಿಗೆ ಬಲವಾದ ಏಟು ಬಿದ್ದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ.