ಮಂಗಳೂರು, ಮಾ 01: ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದ ನಾಮಫಲಕದ ತಾರಾಲಯ ಉದ್ಘಾಟನೆಯ ಮೊದಲು ಸಾರ್ವಜನಿಕವಾಗಿಯೇ ಹಾಲಿ ಶಾಸಕರಿಬ್ಬರು ಮಾತಿನ ಚಕಮಕಿ ನಡೆಸಿದ ಘಟನೆ ಮಾ 1 ರ ಗುರುವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮುಲ್ಕಿ ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವ ಪರಸ್ಪರ ಸಿಟ್ಟಿಗೆದ್ದು ಮಾತಿನ ಚಕಮಕಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಕ್ರಮದ ಉದ್ಘಾಟನೆಗೂ ಮುಂಚೆ, ಈ ಘಟನೆ ನಡೆದಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ, ಮೇಯರ್ ಕವಿತಾ ಸನಿಲ್ ಅವರಿಗೆ ಟಿಕೆಟ್ ನೀಡುವ ಕುರಿತ ಮಾತುಕತೆ ವಿಕೋಪಕ್ಕೆ ತಿರುಗಿ ಇವರಿಬ್ಬರ ನಡುವೆ ಆಕ್ರೋಶಕ್ಕೆ ಕಾರಣವಾಯಿತು ಎಂದು ತಿಳಿದು ಬಂದಿದೆ.
ಶಾಸಕ ಮೊಯಿದ್ದೀನ್ ಬಾವ ಹಾಗೂ ಶಾಸಕ ಅಭಯ ಚಂದ್ರ ಜೈನ್ ಅವರು ಮಾತುಕತೆ ನಡೆಸುತ್ತಿರುವಾಗ ಶಾಸಕ ಬಾವ , ಮೇಯರ್ ಕವಿತಾ ಸನಿಲ್ ಅವರ ಅಧಿಕಾರಾವಧಿ ಶೀಘ್ರದಲ್ಲೇ ಕೊನೆಯಾಗಲಿದ್ದು, ಕವಿತಾ ಸನಿಲ್ ಅವರು ಮೂಡುಬಿದಿರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಿದರು. ತಕ್ಷಣ ತಮ್ಮ ಕ್ಷೇತ್ರದ ಹೆಸರನ್ನು ಉಲ್ಲೇಖಿಸಿದಾಗ ತಾಳ್ಮೆ ಕಳೆದುಕೊಂಡ ಅಭಯಚಂದ್ರ ಜೈನ್ ಏಕಾಏಕಿ ಮೊಯಿದ್ದೀನ್ ಬಾವ ಅವರನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು. ತಕ್ಷಣ ಮದ್ಯೆ ಪ್ರವೇಶಿಸಿದ ಬೆಂಬಲಿಗರು ಇಬ್ಬರನ್ನು ಪರಸ್ಪರ ಶಾಂತಗೊಳಿಸುವಲ್ಲಿ ಸಫಲರಾದರು ಎನ್ನಲಾಗಿದೆ.
ಅಭಯ ಚಂದ್ರ ಜೈನ್ ಈ ಹಿಂದೆ ಹಲವು ಬಾರಿ ಸಾರ್ವಜನಿಕವಾಗಿ ರಾಜಕೀಯ ಮುಖಂಡರೊಂದಿಗೆ ಮುನಿಸಿಕೊಂಡಿದ್ದು , ಎರಡು ಮೂರು ತಿಂಗಳ ಹಿಂದೆ ಮುಖ್ಯಮಂತ್ರಿ ಭೇಟಿ ನೀಡಿದ ಸಂದರ್ಭದಲ್ಲೂ ಅವರು ವಿಧಾನಪರಿಷತ್ ಸದಸ್ಯ ಐವನ್ ಡಿ,ಸೋಜಾ ಅವರೊಂದಿಗಿನ ಮನಸ್ತಾಪವನ್ನು ಸಾರ್ವಜನಿಕವಾಗಿಯೇ ಹೊರಗೆಡವಿದ್ದರು.
ಅಭಯಚಂದ್ರ ಜೈನ್ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ, ತಮ್ಮ ಕ್ಷೇತ್ರವನ್ನು ಯುವ ಕಾಂಗ್ರೆಸ್ ಅಭ್ಯರ್ಥಿಗೆ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿದ ಬಳಿಕ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗಿದೆ.