ಬೆಂಗಳೂರು, ಫೆ 28 : ಕರ್ನಾಟಕ ವಿಧಾನಸಭೆ ಚುನಾವಣೆಗೆಯಲ್ಲಿ ಅಧುನಿಕ ಮತಯಂತ್ರಗಳನ್ನೇ ಬಳಸಿಕೊಳ್ಳುತ್ತಿದ್ದು. ಮತಯಂತ್ರದ ಕುರಿತು ಸುಳ್ಳು ಸುದ್ದಿ ಹರಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ಮುಂಬರುವ ಚುನಾವಣೆಗಾಗಿ ಕರ್ನಾಟಕಕ್ಕೆ 56,290 ಮತಯಂತ್ರಗಳು ರಾಜ್ಯಕ್ಕೆ ಬಂದಿವೆ. ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯಗಳಿಂದ ಇವಿಎಂ ತಂದಿರಿಸಿಕೊಳ್ಳಲಾಗಿದೆ. ಉತ್ತರಪ್ರದೇಶದಿಂದ 40 ಸಾವಿರ ಇವಿಎಂ ತರಿಸಿಕೊಳ್ಳಲಾಗಿದ್ದು, ಇವಿಎಂ ಬಳಕೆಯಲ್ಲಿ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. ಮತ ಚಲಾಯಿಸಿದ ಬಳಿಕ ಮತದಾರ 7 ಸೆಕೆಂಡ್ ಗಳವರೆಗೆ ಯಂತ್ರದಲ್ಲಿ ನೋಡುವ ಹೊಸ ವಿಧಾನ ಆಳವಡಿಕೆಯಾಗಿದೆ. ಇವಿಎಂ ಅತ್ಯಂತ ಸಮರ್ಪಕವಾಗಿದೆ ಎಂದರು. ಗುಜರಾತ್ ಮತ್ತು ಉತ್ತರಪ್ರದೇಶಗಳಲ್ಲಿ ಬಳಸಿರುವ ಇವಿಎಂಗಳು ರಾಜ್ಯಕ್ಕೆ ಬಂದಿವೆ ಎಂಬ ಅನುಮಾನ ಬೇಡ. ಈ ಕುರಿತು ತಪ್ಪು ಸುದ್ದಿ , ಸುಳ್ಳು ಮಾಹಿತಿ ಹರಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಇದೇ ವೇಳೆ ಖಡಕ್ ಎಚ್ಚರಿಕೆ ನೀಡಿದರು.