ಮಂಗಳೂರು, ಫೆ28: ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಮಡೆಮಡೆ ಸ್ನಾನ ವಿಚಾರ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.
ಭಕ್ತರೊಬ್ಬರು ಸುಬ್ರಹ್ಮಣ್ಯದಲ್ಲಿ ಮಡೆಮಡೆ ಸ್ನಾನವನ್ನು ಮತ್ತೆ ಆರಂಭಿಸಬೇಕು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಬಂಟ್ವಾಳದ ಮಾಣಿ ನಿವಾಸಿ ಪಾರ್ಪಕಜೆ ವೆಂಕಟರಮಣ ಭಟ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿದ್ದು, ಸುಬ್ರಹ್ಮಣ್ಯದಲ್ಲಿ ಮಡೆಮಡೆ ಸ್ನಾನ ಮತ್ತೆ ಆರಂಭಿಸುವ ಕುರಿತಾದ ದಾವೆ ಸಲ್ಲಿಸಿದ್ದಾರೆ.
ದೇವಾಲಯದ ಆಡಳಿತ ಮಂಡಳಿಯ ಹತ್ತಿರ ವೆಂಕಟರಮಣ ಭಟ್ ಮಡೆ ಮಡ ಸ್ನಾನಕ್ಕೆ ಅವಕಾಶ ಕೇಳಿದ್ದರು. ಆದರೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ವೆಂಕಟರಮಣ ಭಟ್ ಅವರ ಮನವಿಯನ್ನು ತಿರಸ್ಕರಿಸಿತ್ತು. ಇದರಿಂದ ತನ್ನ ಮೂಲಭೂತ ಧಾರ್ಮಿಕ ಹಕ್ಕಿಗೆ ಧಕ್ಕೆಯಾಗಿದೆ ಎಂದು ವೆಂಕಟರಮಣ ಭಟ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ವೆಂಕಟರಮಣ ಭಟ್ ತಮ್ಮ ಮನವಿಯಲ್ಲಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿದ್ದ ಆಚರಣೆಯನ್ನು ನಿರಾಕರಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ. ಇದೀಗ ಅವರ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಮುಂದಾಗಿದೆ.